ಕೊಲೆ ಶಂಕೆ; ಹೂತಿದ್ದ ಶವ ಹೊರ ತೆಗೆದು ಪರೀಕ್ಷೆ
ಚಿಕ್ಕಬಳ್ಳಾಪುರ: ಸುಮಾರು 40 ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದ ವ್ಯಕ್ತಿಯ ಸಾವಿನ ಬಗ್ಗೆ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಹೂತ್ತಿದ್ದ ಶವವನ್ನು ಹೊರ ತೆಗೆದ ಘಟನೆ ತಾಲೂಕಿನ ಅಗಲಗುರ್ಕಿಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಗ್ರಾಮದ ರಾಮಾಂಜಿ (38) ನಾಲ್ಕು ತಿಂಗಳುಗಳ ಹಿಂದೆ ನೀಲಗಿರಿ ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಗ್ರಾಮದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು. ಆದರೆ, ಅಸಹಜ ಸಾವಾದರೂ ಸಹ ಸಂಬಂಧಪಟ್ಟ ಪೊಲೀಸರಿಗೆ ಈ ವಿಷಯ ಮುಟ್ಟಿಸಿರಲಿಲ್ಲ. ಈ ನಿಟ್ಟಿನಲ್ಲಿ ಅನುಮಾನ ಹುಟ್ಟಿಕೊಂಡಿದ್ದು ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಹೊರ ತೆಗೆಯಲಾಗಿದೆ.
ಸಿಎಂಗೆ ದೂರು: ರಾಮಾಂಜಿ ಆತ್ಮಹತ್ಯೆ ಸಂಬಧ ಅನಾಮಿಕರು ಮುಖ್ಯಮಂತ್ರಿ, ಗೃಹಮಂತ್ರಿ, ಡಿಜಿಪಿ, ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಅದರಲ್ಲಿ ರಾಮಾಂಜಿ ಆತ್ಮಹತ್ಯೆ ಮಾಡಿಕೊಂಡಿಲ್ಲ. ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಆತನನ್ನು ಕೊಲೆ ಮಾಡಿ ಗ್ರಾಮದ ನೀಲಗಿರಿ ಮರವೊಂದಕ್ಕೆ ನೇಣು ಹಾಕಲಾಗಿದೆ. ತರಾತುರಿಯಲ್ಲಿ ಕುಟುಂಬದವರಿಂದ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.ಈಗ ಹೂತಿರುವ ಶವವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿದರೆ ಸತ್ಯಾಂಶ ಬಯಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ಮೇಲಾಧಿಕಾರಿಗಳು ಉಪ ವಿಭಾಗಾಧಿಕಾರಿಗೆ ಪತ್ರ ಬರೆದು ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಹೂತ್ತಿದ್ದ ಶವವನ್ನು ಹೊರ ತೆಗೆಯಲಾಯಿತು.
ಪ್ರಕರಣ ದಾಖಲು: ಮೇಲಧಿಕಾರಿಗಳ ಆದೇಶದಂತೆ ಉಪ ವಿಭಾಗಾಧಿಕಾರಿ ಶಾಂತಲಾರವರ ಸಮ್ಮುಖದಲ್ಲಿ ಶವವನ್ನು ಹೊರ ತೆಗೆಯುವ ಕೆಲಸವನ್ನು ಸೋಮವಾರ ಕೈಗೊಳ್ಳಲಾಯಿತು.
ಕುಟುಂಬದವರ ಅಳಲು: ತಮ್ಮ ಪತಿ ರಾಮಾಂಜಿಯವರನ್ನು ಯಾರೂ ಕೊಂದಿಲ್ಲ. ಈ ಬಗ್ಗೆ ಯಾರ ಮೇಲೂ ಅನುಮಾನ ಇಲ್ಲ. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಗ ಅಂತ್ಯಸಂಸ್ಕಾರದ ವೇಳೆ ಗ್ರಾಮಸ್ಥರೆಲ್ಲರೂ ಭಾಗವಹಿಸಿದ್ದರು. ಆದರೆ ಯಾರೋ ಕೊಲೆ ಎಂದು ತಿಳಿಸಿ ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿರುವ ಅಂಶಗಳು ಸುಳ್ಳಾಗಿವೆ. ಇದರಿಂದ ತಮಗೆ ತುಂಬಾ ನೋವಾಗಿದೆ ಎಂದು ಮೃತನ ಪತ್ನಿ ಶೋಭಾ ತಿಳಿಸಿದ್ದಾರೆ. ಹಾಗೆಯೇ ಮೃತನ ಕುಟುಂಬದವರೆಲ್ಲರೂ ಸಹ ಮನನೊಂದು ರಾಮಾಂಜಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದೇ ಪ್ರತಿಪಾದಿಸುತ್ತಿದ್ದಾರೆ. ಈ ನಡುವೆ ಅನುಮಾನ ಹೆಚ್ಚಾಗುತ್ತಿದ್ದು, ತನಿಖೆಯಿಂದಷ್ಟೆ ಸತ್ಯಾಂಶ ಹೊರ ಬೀಳಬೇಕಿದೆ.
ಆಟೋ-ಲಾರಿ ಡಿಕ್ಕಿ: ವ್ಯಕ್ತಿ ಸಾವು
ಕೋಲಾರ: ನಿಂತಿದ್ದ ಲಾರಿಗೆ ಆಟೋರಿಕ್ಷಾ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬ ಸಾವಿನ್ನಪ್ಪಿದ ಘಟನೆ ಭಾನುವಾರ ರಾತ್ರಿ ಕೋಲಾರ - ಮುಳಬಾಗಿಲು ರಸ್ತೆಯ ಕಾಳಹಸ್ತೀಪುರ ಗೇಟ್ ಸಮೀಪ ನಡೆದಿದೆ. ತಾಲೂಕಿನ ಕುರುಬರಹಳ್ಳಿ ಗ್ರಾಮದ ರಾಮಕೃಷ್ಣ (42) ನತದೃಷ್ಟ ಮೃತರಾಗಿದ್ದಾರೆ. ಕೋಲಾರದಿಂದ ಖಾಲಿ ಟೋಮೆಟೋ ಬಾಕ್ಸ್‌ಳನ್ನು ತುಂಬಿಕೊಂಡು ಕುರುಬರ ಹಳ್ಳಿಗೆ ಹೋಗುತ್ತಿದ್ದ ವೇಳೆ ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಆಟೋ ರಿಕ್ಷಾ ಡಿಕ್ಕಿ ಹೊಡೆದು ಪರಿಣಾಮ ದುರ್ಘಟನೆ ಸಂಭವಿಸಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.