ದೇವರಾಜ ಅರಸು ಸ್ಮಾರಕ ನಿರ್ಮಾಣಕ್ಕೆ ಒತ್ತಾಯಿಸಿ ಪ್ರತಿಭಟನೆ
ಕೋಲಾರ: ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರು ವಾಸವಿದ್ದ ಬೆಂಗಳೂರಿನ ಸದಾಶಿವನಗರದ ಮನೆಯನ್ನು ಧ್ವಂಸಗೊಳಿಸಿ ವಿರೂಪಗೊಳಿಸಿರುವ ಕೃತ್ಯ ಖಂಡಿಸಿ ಮತ್ತು ಅದೇ ಜಾಗದಲ್ಲಿ ಅರಸು ಸ್ಮಾರಕವನ್ನು ನಿರ್ಮಾಣ ಮಾಡುವಂತೆ ಒತ್ತಾಯಿಸಿ ಸಮತಾ ಸೈನಿಕ ದಳ ಸೋಮವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿತು. ಸಚಿವರೊಬ್ಬರ ಸೊಸೆ ಪ್ರಭಾ ಎಸ್. ಮಲ್ಲಿಕಾರ್ಜುನ ಈ ಜಾಗವನ್ನು ಕಬಳಿಸಲು ತಮ್ಮ ರಾಜಕೀಯ ಒತ್ತಡ ಬಳಸಿಕೊಂಡು ಅರಸುರವರ ಬಂಗಲೆಯನ್ನು ಧ್ವಂಸಗೊಳಿಸಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು. ಅರಸು ಸ್ವತ್ತಿನ ಅಕ್ರಮ ಮಾರಾಟ ಪ್ರಕರಣವನ್ನು ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿದರು. ಎಸ್ಎಸ್ಡಿ ಜಿಲ್ಲಾಧ್ಯಕ್ಷ ಕೃಷ್ಣಯ್ಯ, ಆರ್ಪಿಐ ಜಿಲ್ಲಾಧ್ಯಕ್ಷ ಬಿ.ವಿ.ವಿ.ಗಿರಿ, ರಾಜ್ಯ ಉಪಾಧ್ಯಕ್ಷ ರಾಮಕೃಷ್ಣಯ್ಯ, ಜಿಲ್ಲಾ ಉಪಾಧ್ಯಕ್ಷ ರಾಮಯ್ಯ, ವೆಂಕಟೇಶ್, ಚಿಟ್ಟಿಬಾಬು, ಮಂಜುನಾಥ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಅಶ್ವತ್ಥರೆಡ್ಡಿ ಟಿಎಪಿಸಿಎಂಎಸ್ ಅಧ್ಯಕ್ಷ
ಗೌರಿಬಿದನೂರು: ಇಲ್ಲಿನ ಟಿಎಪಿಸಿಎಂಎಸ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಲಾಟರಿ ಮೂಲಕ ಬಿಜೆಪಿ ಬೆಂಬಲಿತ ಅಭ್ಯರ್ಥಿ ಎ.ಅಶ್ವತ್ಥರೆಡ್ಡಿಗೆ ಅಧ್ಯಕ್ಷಸ್ಥಾನ ಒಲಿದು ಬಂದಿದೆ. ಒಟ್ಟು ಹನ್ನೊಂದು ಮತಗಳ ಚಲಾವಣೆ ಯಾಗಿದ್ದು, ಅದರಲ್ಲಿ ಒಂದು ಮತ ತಿರಸ್ಕೃತವಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಎ.ಅಶ್ವತ್ಥರೆಡ್ಡಿಗೆ ಐದು ಮತಗಳು ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಹನುಮಂತರೆಡ್ಡಿಗೆ ತಲಾ ಐದು ಮತಗಳು ಅಂದರೆ, ಇಬ್ಬರಿಗೂ ಸರಿಸಮ ಮತಗಳು ಲಭಿಸಿದ್ದವು. ಈ ನಿಟ್ಟಿನಲ್ಲಿ ಚುನಾವಣಾ ಅಧಿಕಾರಿ ಪ್ರಸಾದ್ ಇಬ್ಬರು ಅಭ್ಯರ್ಥಿಗಳ ಸಮ್ಮುಖದಲ್ಲಿ ಲಾಟರಿ ಎತ್ತಿದಾಗ ಬಿಜೆಪಿ ಬೆಂಬಲಿತ ಅಭ್ಯರ್ಥಿ ಎ.ಅಶ್ವತ್ಥರೆಡಿ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ. ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ನೂತನ ಅಧ್ಯಕ್ಷರನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಎಂ. ರವಿನಾರಾಯಣರೆಡ್ಡಿ, ಮಂಡಲ ಬಿಜೆಪಿ ಅಧ್ಯಕ್ಷ ಬಿ.ವಿ.ಗೋ ಪಿನಾಥ್, ಜೆ.ವಿ.ಹನುಮೇಗೌಡ, ಕರೇತಿಮ್ಮಯ್ಯ, ಕೆ.ವಿ.ಕೃಷ್ಣಮೂರ್ತಿ, ಸಿ.ಎ.ನಾರಾಯಣರೆಡ್ಡಿ, ನದಿದಡ ಜಯಪ್ಪ, ಪುರಸಭೆ ಸದಸ್ಯ ಬಿ.ಜಿ.ಗೋವಿಂದ ರಾಜು ಮತ್ತಿತರರು ಅಭಿನಂದಿಸಿದರು.
ಗೌರಿಬಿದನೂರು: ಅರಸು ಸ್ಮಾರಕಕ್ಕೆ ಎಸ್ಸೆಸ್ಡಿ ಒತ್ತಾಯ
ಗೌರಿಬಿದನೂರು: ಮಾಜಿ ಮುಖ್ಯಮಂತ್ರಿ ದಿ.ದೇವರಾಜು ಅರಸು ವಾಸವಿದ್ದ ಮನೆಯನ್ನು ಅವರ ನೆನಪಿನಲ್ಲಿ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ಸಮತಾ ಸೈನಿಕ ದಳದ ತಾಲೂಕು ಅಧ್ಯಕ್ಷ ಜಿ.ಅಶ್ವತ್ಥಪ್ಪ ಆಗ್ರಹಿಸಿದ್ದಾರೆ. ಈ ಸಂಬಂಧ ಎಸ್ಎಸ್ಡಿ ಕಾರ್ಯಕರ್ತರ ನಿಯೋಗ ಜೊತೆ ತಹಸೀಲ್ದಾರ್ ಡಾ.ಎನ್.ಭಾಸ್ಕರ್ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈ ವಿಷಯ ತಿಳಿಸಿದರು. ಶೋಷಿತ ವರ್ಗದ ಧ್ವನಿಯಾಗಿದ್ದ ಅರಸು ಅಹಿಂದ ವರ್ಗದ ನೂರಾರು ಮಂದಿಗೆ ರಾಜಕೀಯ ಶಕ್ತಿ ತುಂಬಿದರು ಈ ನಿಟ್ಟಿನಲ್ಲಿ ಸರ್ಕಾರ ದೇವರಾಜು ಅರಸರ ನೆನಪಿನಲ್ಲಿ ಸ್ಮಾರಕ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಅಭಾವಿಪ ಪುಸ್ತಕ ಅಭಿಯಾನ
ಚಿಂತಾಮಣಿ: ದೇಶದಾದ್ಯಂತ ಸ್ವಾಮಿ ವಿವೇಕಾನಂದರ 150 ನೇ ಜನ್ಮದಿನಾಚರಣೆ ಅಂಗವಾಗಿ ಎಬಿವಿಪಿ ಸ್ವಾಮಿ ವಿವೇಕಾನಂದರ ಜೀವನ ಆಧಾರಿತ ಮತ್ತು ವಿದ್ಯುತ್ವಾಣಿ ಪುಸ್ತಕಗಳು ಪ್ರತಿಯೊಬ್ಬ ವಿದ್ಯಾರ್ಥಿಯು ಓದಿ ಸಾರ್ಥಕ ಮಾಡಿಕೊಳ್ಳಬೇಕೆಂಬ ಸಂಕಲ್ಪದೊಂದಿಗೆ ಅಭಾವಿಪ ಪುಸ್ತಕ ಅಭಿಯಾನ ಕೈಗೊಂಡಿದ್ದು ಪುಸ್ತಕ ಬಿಡುಗಡೆ ಮತ್ತು ವಿತರಣೆ ಮಾಡುತ್ತಿದೆ. ಇದರ ಅಂಗವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಅಭಾವಿಪ ನೇತೃತ್ವದಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಗೋಪಾಲಗೌಡ ರವರಿಗೆ ಮೊದಲ ಪುಸ್ತಕ ನೀಡುವ ಮೂಲಕ ಪುಸ್ತಕ ಅಭಿಯಾನಕ್ಕೆ ಚಾಲನೆ ದೊರೆಯಿತು. ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಮಂಜುನಾಥರೆಡ್ಡಿ, ಸುರೇಶ್, ನವಾಜ್ ಉಪಸ್ಥಿತರಿದ್ದರು.
ವಿದ್ಯಾರ್ಥಿ ನಿಲಯಕ್ಕೆ ತಾಪಂ ಅಧ್ಯಕ್ಷರ ದಿಢೀರ್ ಭೇಟಿ
ಟೇಕಲ್: ಮಾಸ್ತಿ ಗ್ರಾಮದ ಸಾರ್ವಜನಿಕ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ತಾಪಂ ಅಧ್ಯಕ್ಷ ಪುಟ್ಟಸ್ವಾಮಿ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಇಲ್ಲಿ ಪಾಠ ಪ್ರವಚನಕ್ಕೆ ಭಾರೀ ತೊಂದರೆಯಾಗಿದ್ದು, ಇದಲ್ಲದೆ ಸುತ್ತಲೂ ಗಿಡಗಂಟೆಗಳು ಬೆಳೆದಿದ್ದು ಸ್ವಚ್ಛತೆಯಿಲ್ಲದೆ, ಸೊಳ್ಳೆಗಳ ಕಾಟ ವಿಪರೀತವಾಗಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು. ಇದಕ್ಕೆ ಸ್ಪಂದಿಸಿದ ಅಧ್ಯಕ್ಷರು ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಇಲ್ಲಿನ ಸಿಬ್ಬಂದಿ ನಿಮಗೆ ಸ್ಪಂಧಿಸದಿದ್ದಲ್ಲಿ ತಕ್ಷಣ ನಮ್ಮ ಗಮನಕ್ಕೆ ತಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಸಿದರು. ತಾಪಂ ಸದಸ್ಯ ಕೆ. ಚಂದ್ರಪ್ಪ, ತಾಪಂ ಸಂಯೋಜಕ ಗೋಪಾಲಕೃಷ್ಣ, ಮುಖಂಡರಾದ ಎಚ್.ವಿ. ಸತೀಶ್ ಮತ್ತಿತರರು ಹಾಜರಿದ್ದರು.
ಮಿನಿ ಉದ್ಯೋಗ ಮೇಳ
ಗುಡಿಬಂಡೆ: ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಭಾನುವಾರ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ನೇತೃತ್ವದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿತ್ತು. ಈ ಸಂಬಂಧ ನಡೆದ ಸಂದರ್ಶನದಲ್ಲಿ 131 ಮಂದಿ ಅಭ್ಯರ್ಥಿಗಳು ಉದ್ಯೋಗಕ್ಕಾಗಿ ನೋಂದಾಯಿಸಿಕೊಂಡಿದ್ದು, ಅ.5ರಂದು ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.