ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪ್ರೌಢಶಾಲಾ ಶಿಕ್ಷಕರಿಗೆ ಕರಾಟೆ ತರಬೇತಿ ಸಮಾರೋಪ

Vishwanath S
Updated On : 1 Oct 2013, 12:59 pm

ಕೋಲಾರ: ಹೆಣ್ಣು ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವುದರೊಂದಿಗೆ ಸಮಾಜದಲ್ಲಿ ಬದುಕಲು ಬೇಕಾದ ಕೌಶಲ್ಯ ನೀಡುವ ಶಿಕ್ಷಣದಲ್ಲಿ ಕರಾಟೆಯೂ ಒಂದಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಲಿಂಗಯ್ಯ ತಿಳಿಸಿದರು.
ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಕಳೆದ 12 ದಿನಗಳಿಂದ ಪ್ರೌಢಶಾಲಾ ಶಿಕ್ಷಕರಿಗಾಗಿ ಏರ್ಪಡಿಸಿದ್ದ ಕರಾಟೆ ತರಬೇತಿ ಸಮಾರೋಪದಲ್ಲಿ ಚಿತ್ರನಟ ಹಾಗೂ ಖ್ಯಾತ ಕರಾಟೆ ಶಿಕ್ಷಕ ಕರಾಟೆ ಶ್ರೀನಿವಾಸ್ ಅವರನ್ನು ಸನ್ಮಾನಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಆಧುನಿಕತೆಗೆ ತಕ್ಕಂತೆ ಮಕ್ಕಳಿಗೆ ಬದುಕಲು, ಮೌಲ್ಯಗಳೊಂದಿಗೆ  ಆತ್ಮ ರಕ್ಷಣೆಯ ಶಿಕ್ಷಣ ನೀಡಿಕೆಗೆ ಶಿಕ್ಷಣ ಇಲಾಖೆ ಮುಂದಾಗಿದೆ ಎಂದರು.
ಈ ನಿಟ್ಟಿನಲ್ಲಿ ಶಿಕ್ಷಕರನ್ನು ತರಬೇತುಗೊಳಿಸಿ ಅವರಿಂದ ಪ್ರೌಢಶಾಲಾ ಮಕ್ಕಳಿಗೆ ಕರಾಟೆ ಕಲಿಸಿ ಎದುರಾಗುವ ದೌರ್ಜನ್ಯವನ್ನು ಸಮರ್ಥವಾಗಿ ಎದುರಿಸಿ ನಿಲ್ಲುವ ಆತ್ಮವಿಶ್ವಾಸ ಮೂಡಿಸುವ ಉದ್ದೇಶ ಇಲಾಖೆಯದ್ದಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಕರಾಟೆಯೂ ಹೊಸ ಶಿಕ್ಷಣ ನೀತಿಯಲ್ಲಿ ಒಂದು ಪಠ್ಯವಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದರು.
ಜಿಲ್ಲಾ ಮಾಧ್ಯಮ ಶಿಕ್ಷಣ ಅಭಿಯಾನದ ಸಮನ್ವಯಾಧಿಕಾರಿ ಸಿದ್ದಗಂಗಯ್ಯ, ಮಾಧ್ಯಮ ಶಿಕ್ಷಣ ಅಭಿಯಾನದಡಿ ಕರಾಟೆ ತರಬೇತಿ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರತಿ ಹತ್ತು ಶಾಲೆಗಳಿಗೆ ಒಬ್ಬ ವೃತ್ತಿನಿರತ ಕರಾಟೆ ಪಟುವನ್ನು ಶಿಕ್ಷಣ ನೀಡಲು ಕಳುಹಿಸುವ ಉದ್ದೇಶ ಇಲಾಖೆಗಿದೆ ಎಂದರು. ಕರಾಟೆ ಶಿಕ್ಷಕ ಶ್ರೀನಿವಾಸ್, ಅತಿ ಕಡಿಮೆ ಅವಧಿಯಲ್ಲಿ ಶಿಕ್ಷಕರಿಗೆ ತರಬೇತಿ ನೀಡಿ ಸಜ್ಜುಗೊಳಿಸುವುದನ್ನು ಶ್ಲಾಘಿಸಿದ ಅವರು, ಶಿಕ್ಷಕರು ಈ ಸಂದರ್ಭದಲ್ಲಿ ನೀಡಿದ ಕರಾಟೆ ಪ್ರದರ್ಶನದ ಕುರಿತು ಸಂತಸ ವ್ಯಕ್ತಪಡಿಸಿದರು.
ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಬಸವರಾಜ ಚಿಲಕಾಂತ ಮಠ್, ಹೆಣ್ಣು ಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯದಿಂದ ಆತ್ಮ ರಕ್ಷಣೆ ಪಡೆಯುವ ಸಾಮರ್ಥ್ಯವನ್ನು ಕರಾಟೆ ಮೂಲಕ ಮಕ್ಕಳಲ್ಲಿ ಬೆಳೆಸಬೇಕೆಂದು ತಿಳಿಸಿ ದೈಹಿಕ ಶಿಕ್ಷಕರು ಆಸಕ್ತಿಯಿಂದ ಕಲಿಕೆಯಲ್ಲಿ ಸಾಧನೆ ಮಾಡಿದ್ದಾರೆಂದರು.
ಕರಾಟೆ ತರಬೇತಿಯಲ್ಲಿ ಪಾಲ್ಗೊಂಡ ಶಿಕ್ಷಕರಿಗೆ ಸಮವಸ್ತ್ರ ಕೊಡುಗೆಯಾಗಿ ನೀಡಿದ ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಇ. ಶ್ರೀನಿವಾಸಗೌಡ, ಕರಾಟೆ ಕಲಿಯಿರಿ, ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿ ಎಂದು ಕರೆ ನೀಡಿದರು.
ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಎಸ್. ಚೌಡಪ್ಪ ಸ್ವಾಗತಿಸಿ, ಮುರಳಿ ಮೋಹನ್ ವಂದಿಸಿದರು.
ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಮಂಜುನಾಥ್, ಕ್ಯಾಲನೂರು ಶಾಲೆ ಮುಖ್ಯ ಶಿಕ್ಷಕ ರಾಮಕೃಷ್ಣ, ಶಿಕ್ಷಕರ ಸಂಘದ ಪದಾಧಿಕಾರಿ ಮುರಳೀಮೋಹನ್, ಜೂನಿಯರ್ ಕಾಲೇಜು ಉಪ ಪ್ರಾಂಶುಪಾಲ ಗೋವಿಂದಪ್ಪ,  ದೈಹಿಕ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಕೆಂಪೇಗೌಡ, ಅನುದಾನಿರ ಶಾಲೆ ಆಡಳಿತ ಮಂಡಳಿಯ ಅಬ್ದುಲ್ ಮನ್ನಾನ್, ದೈಹಿಕ ಶಿಕ್ಷಕರಾದ ನಾರಾಯಣಸ್ವಾಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement