ಪ್ಲಾಸ್ಟಿಕ್ ಬಳಕೆ ಬೇಡವೇ ಬೇಡ: ಜಿಲ್ಲಾಧಿಕಾರಿ
ಕೋಲಾರ: ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಪೌಷ್ಟಿಕ ಆಹಾರವನ್ನು ಸರಬರಾಜು ಮಾಡಲು ಪ್ಲಾಸ್ಟಿಕ್ ಚೀಲ ಬಳಸದಂತೆ ಜಿಲ್ಲಾಧಿಕಾರಿ ಡಿ.ಕೆ. ರವಿ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಪೌಷ್ಟಿಕಾಂಶ ಆಹಾರ ಸರಬರಾಜು ಮೇಲುಸ್ತುವಾರಿ ಸಮಿತಿಯ ಸಭೆಯಲ್ಲಿ ಅವರು ಮಾತನಾಡಿದರು.
ಪ್ಲಾಸ್ಟಿಕ್ ಚೀಲಗಳಲ್ಲಿ ಪೌಷ್ಟಿಕ ಆಹಾರ ಪದಾರ್ಥಗಳನ್ನು ತುಂಬಿ ಕಳುಹಿಸುವುದರಿಂದ ಪರಿಸರಕ್ಕೆ ಹಾನಿ ಆಗುತ್ತದೆ, ಇದಕ್ಕೆ ಬದಲು ಗೋಣಿ ಚೀಲಗಳನ್ನು ಅಥವಾ ಪ್ಲಾಸ್ಟಿಕ್ ರಹಿತ ಚೀಲಗಳನ್ನು ಬಳಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.
ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡುವ ಪೌಷ್ಟಿಕ ಆಹಾರ ಪದಾರ್ಥಗಳನ್ನು ಖರೀದಿ ಮಾಡಲು ಎಂ.ಎಸ್.ಪಿ.ಟಿ.ಸಿ.ಎಲ್ ಮೂಲಕವೇ ಟೆಂಡರ್ ಕರೆಯುವುದು ಸೂಕ್ತ, ಜೊತೆಗೆ ಅಲ್ಲಿಂದಲೇ ಆಹಾರ ಸರಬರಾಜು ಮಾಡಲು ಮಾರ್ಗ ಸೂಚಿಯ ನಕ್ಷೆ ಸಿದ್ಧಪಡಿಸಿದಲ್ಲಿ ಸಮಯ ವ್ಯರ್ಥ ಮಾಡುವುದು ತಪ್ಪುತ್ತದೆ ಎಂದರು. ಪೌಷ್ಟಿಕ ಆಹಾರವನ್ನು ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಏಕಕಾಲದಲ್ಲಿ ಸರಬರಾಜು ಮಾಡುವ ಸಂಬಂಧ 5 ಪ್ಯಾಕೇಜ್‌ಗಳನ್ನು ಮಾಡುವಂತೆಯೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸಲಹೆ ನೀಡಿದರು.
ಪೌಷ್ಟಿಕ ಆಹಾರ ವಿತರಣೆಗಾಗಿ ರಚಿಸಿರುವ ಮೇಲುಸ್ತುವಾರಿ ಸಮಿತಿಯ ಸದಸ್ಯರಾದ ಮಕ್ಕಳ ತಜ್ಞರು, ಶಿಶು ಅಭಿವೃದ್ಧಿ ಅಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ, ಪೌಷ್ಟಿಕ ಆಹಾರದ ಗುಣಮಟ್ಟ ಪರಿಶೀಲನಾಧಿಕಾರಿ, ಡಿಡಿಪಿಐ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಸಮನ್ವಯದಿಂದ ಕೆಲಸ ನಿರ್ವಹಿಸುವ ಮೂಲಕ ಸರ್ಕಾರದ ಯೋಜನೆ ಫಲಪ್ರದವಾಗುವಂತೆ ಎಚ್ಚರ ವಹಿಸಲು ಜಿಲ್ಲಾಧಿಕಾರಿ ತಿಳಿಸಿದರು.
ಇಲಾಖೆಯ ಉಪ ನಿರ್ದೇಶಕಿ ಶಕುಂತಲಾ, ಡಿಹೆಚ್‌ಒ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.