ರೈತರೆಡೆಗೆ ಸರ್ಕಾರದ ನಿರಾಸಕ್ತಿ ಸಲ್ಲ
ಕ.ಪ್ರ.ವಾರ್ತೆ , ಶಿಡ್ಲಘಟ್ಟ , ಸೆ. 30
ರಾಜ್ಯದ ಒಟ್ಟು ತೆರಿಗೆ ಶೇ.75ರಷ್ಟು ತೆರಿಗೆಯನ್ನು ರೈತರು ಪಾವತಿಸುತ್ತಿದ್ದು, ಸರ್ಕಾರವು ರೈತರ ಬಗ್ಗೆ ಸರಿಯಾಗಿ ಗಮನ ಹರಿಸುತ್ತಿಲ್ಲ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಕಿಡಿಕಾರಿದ್ದಾರೆ. ತಾಲೂಕು ಮಟ್ಟದ ರೈತರ ಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯದ ಬಹುತೇಕ ಕೆರೆಗಳು ಸಂಪೂರ್ಣವಾಗಿ ಬತ್ತಿ ಹೋಗಿದ್ದು, ಅಂತರ್ಜಲ ಮಟ್ಟ 1500 ಅಡಿ ಮಟ್ಟಕೆ ಕುಸಿದಿದ್ದು, ಪ್ಲೋರೈಡ್ಯುಕ್ತ ನೀರನ್ನು ಕುಡಿಯುತ್ತಿದ್ದೇವೆ ಎಂದು ವಿಷಾದಿಸಿದರು.
ಕೊಟ್ಟ ಭರವಸೆ ಏನಾಯಿತು: ಬಯಲುಸೀಮೆ ಪ್ರದೇಶವಾದ ಚಿಕ್ಕಬಳ್ಳಾಪುರ-ಕೋಲಾರದಲ್ಲಿ ನೀರಿಲ್ಲದೆ ಹಳ್ಳಿಯ ಯುವಕರೆಲ್ಲಾ ಬೆಂಗಳೂರಿಗೆ ವಲಸೆ ಹೋಗುತ್ತಿದ್ದು, ವ್ಯವಸಾಯ ಮಾಡುವವರೇ ಇಲ್ಲದಾಗಿದೆ. ಸರ್ಕಾರವು ಚುನಾವಣೆ ಸಮಯದಲ್ಲಿ ರೈತರಿಗೆ ಕೊಟ್ಟ ಆಶ್ವಾಸನೆಗಳು ಏನಾದವು ಎಂದು ಕಟುವಾಗಿ ಟೀಕಿಸಿದರು.
ನೀರಾವರಿ ಬಗ್ಗೆ ಚಕಾರ ಎತ್ತುತಿಲ್ಲ: ಜನರು ಓಟು ಹಾಕಿ ಗೆಲ್ಲಿಸಿದ ಯಾವ ಶಾಸಕರೂ ಇಂದು ವಿಧಾನಸಭೆಯಲ್ಲಿ ಶಾಶ್ವತ ನೀರಾವರಿ ಬಗ್ಗೆ ಚಕಾರ ಎತ್ತುತಿಲ್ಲ. ಜನರ ರುಣವನ್ನು ತೀರಿಸುವುದು ಜನ ಪ್ರತಿನಿಧಿಗಳ ಕರ್ತವ್ಯವಾಗಿದ್ದು, ಶಾಸಕರು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕೆಂದು ತಿಳಿಸಿದರು.
2 ರಂದು ಜಿಲ್ಲಾ ಮಟ್ಟದ ಸಮಾವೇಶ: ಅ. 2 ರಂದು ಚಿಕ್ಕಬಳ್ಳಾಪುರದ ತಾಲೂಕು ಕಚೇರಿ ಎದುರು ಜಿಲ್ಲಾ ಮಟ್ಟದ ಸಮಾವೇಶ ಹಮ್ಮಿಕೊಂಡಿದ್ದು, ಈ ನಿಟ್ಟಿ ನಲ್ಲಿ ಸರ್ಕಾರ ಎಚ್ಚೆತ್ತುಕೊಳ್ಳದಿದ್ದಲ್ಲಿ ಸರ್ಕಾರಿ ಕಚೇರಿಗಳಿಗೆ ಬೀಗ ಹಾಕಲಾಗುವುದೆಂದು ತಿಳಿಸಿದರು.
ಮನೆಗೊಬ್ಬರಂತೆ ಭಾಗವಹಿಸಿ: ಶಾಶ್ವತ ನೀರಾವರಿಗೆ ಮಾಡುವ ಹೋರಾಟದಲ್ಲಿ ಮನೆಗೊಬ್ಬರಂತೆ, ಪ್ರತಿಯೊಬ್ಬರು ಭಾಗವಹಿಸಿದರೆ ಮಾತ್ರ ಹೋರಾಟ ಯಶಸ್ವಿಯಾಗುವುದೆಂದು ತಿಳಿಸಿದರು.
ಹಸಿರು ಸೇನೆ ಅಧ್ಯಕ್ಷ ಭಕ್ತರಹಳ್ಳಿ ಬೈರೆಗೌಡ ಮಾತನಾಡಿ, ಶಿಡ್ಲಘಟ್ಟ ರೇಷ್ಮೆಗೆ ಹೆಸರುವಾಸಿಯಾಗಿದ್ದು, ಬರಪೀಡಿತ ಪ್ರದೇಶವಾಗಿದೆ. ಅಂತರ್ಜಲ ಮಟ್ಟ ಕುಸಿದು ವಿಷಯುಕ್ತ ನೀರನ್ನು ಸೇವಿಸುತ್ತಿದ್ದು ಮುಂದೊಂದು ದಿನ ಕುಡಿಯುವ ನೀರು ಸಿಗುವುದು ಸಹ ಕಷ್ಟಕರವಾದ ದಿನಗಳು ಬರುವ ಸಂಭವವಿರುವುದರಿಂದ ಶಾಶ್ವತ ನೀರಾವರಿ ಹೋರಾಟ ಮಾಡಬೇಕಾಗಿರುವುದು ಎಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ತಾಲೂಕು ದಂಡಾಧಿಕಾರಿ ನಾರಾಯಣಸ್ವಾಮಿ, ತಾಪಂ ಅದ್ಯಕ್ಷ ಯರಬಚ್ಚಪ್ಪ, ವಕೀಲರ ಸಂಘದ ಅದ್ಯಕ್ಷ ಪಾಪಿರೆಡ್ಡಿ, ಜಿಪಂ ಸದಸ್ಯ ನಾರಾಯಣಸ್ವಾಮಿ ಮಳ್ಳೂರು ಹರೀಶ್, ಸುಲೋಚನಮ್ಮ, ವೆಂಕಟರಮಣಪ್ಪ, ಹುಜಗೊರು ರಾಮಣ್ಣ, ಬಿ.ವಿ.ಮುನೇಗೌಡ ಮತ್ತಿತರರು ಹಾಜರಿದ್ದರು.