'ವಿದ್ಯಾರ್ಥಿ ಜೀವನದಲ್ಲೇ ಸಾಹಿತ್ಯಾಭಿರುಚಿ ಮೂಡಲಿ'
ಕೋಲಾರ: ಸಮಾಜದಲ್ಲಿ ಹಿಂದಿನಿಂದ ಬೆಳೆದುಬಂದಿರುವ ಸಾಹಿತ್ಯ ಸಂಸ್ಕೃತ ಉಳಿಸಿ ಬೆಳೆಸಬೇಕಾದರೆ ಪ್ರಾಥಮಿಕ ಹಂತದಿಂದಲೇ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಹಸಿವನ್ನು ಉಂಟು ಮಾಡಬೇಕು. ಇಂತಹ ಹಸಿವಿನಿಂದ ಆರಂಭವಾಗುವ ಪ್ರತಿಬೆಗಳಿಗೆ ಸೂಕ್ತ ವೇದಿಕೆ ನೀಡಿ, ಗುರ್ತಿಸಿದಾಗ ಸಾಹಿತ್ಯವನ್ನು ಜೀವಂತವಾಗಿರಿಸಲು ಸಾಧ್ಯ ಎಂದು ವಕ್ಕಲೇರಿ ವಿದ್ಯಾಭಿವೃದ್ಧಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ವೆಂಕಟಸ್ವಾಮಿ ಅಭಿಪ್ರಾಯಪಟ್ಟರು.
ತಾಲೂಕಿನ ತಿರುಮಲಕೊಪ್ಪ ಗ್ರಾಮದಲ್ಲಿಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶಾಲಾ ಮಕ್ಕಳಿಗಾಗಿ ಚಿಗುರು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾಹಿತ್ಯ ಮತ್ತು ಕಲಿಕೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಮನೆ ಶಾಲೆಗಳಿಂದ ಆರಂಭವಾಗುವ ಆಡು ಭಾಷಯ ಸಾಹಿತ್ಯ ಇಂದು ಸಾಹಿತ್ಯಲೋಕದಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಹೊಂದಿದ್ದು ಇದರಿಂದ ಉತ್ತಮ ಕವಿ, ಸಾಹಿತಿ, ಹಾಡುಗಾರರಾಗಲು ಪ್ರೇರೇಪಿಸುವ ಸಾಧನವಾಗಿದೆ. ಜ್ಞಾನದ ಕಲಿಕೆಗಿಂತ ಸಾಹಿತ್ಯ, ಸಂಗೀತ ಮತ್ತು ಹಾಡಿನ ಸಂಸ್ಕೃತಿ ಇಂದು ಹಾಸು ಹೊಕ್ಕಾಗಿದ್ದು, ಮನೆ ಮನಗಳಲ್ಲಿ ಮುದನೀಡುವ ಸಾಹಿತ್ಯವಾಗಿದೆ ಎಂದರು.
ಜಾನಪದ ಗೀತೆಗಳ ವಿಜೇತರಿಗೆ ಬಹುಮಾನ ವಿತರಿಸಿದ ತಾಲೂಕು ಪಂಚಾಯಿತಿ ನಿರ್ಮಲ ಭಾರತ ಅಭಿಯಾನ, ಸಂಯೋಜಕ ಜಿ. ಶ್ರೀನಿವಾಸ್ ಮಾತನಾಡಿ, ಜನರ ಮನಸ್ಸಿನಲ್ಲಿ ಮೂಡಿದ ಜಾನಪದಕ್ಕೆ ತನ್ನದೇ ಆದ ಇತಿಹಾಸವಿದ್ದು, ಇದು ವಿದ್ಯಾರ್ಥಿಯಿಂದ ಹಿಡಿದು, ವಯಸ್ಸಿನ ಬೇದಭಾವ ಇಲ್ಲದೆ ಮನಸ್ಸಿನಲ್ಲಿ ಮೂಡುವ ಸಾಹಿತ್ಯವಾಗಿದ್ದು ಇದನ್ನು ಕೃತಿರೂಪಕ್ಕೆ ಇಳಿಸಿದಾಗ ಅರ್ಥ ಬರುತ್ತದೆ. ಈ ದಿಸೆಯಲ್ಲಿ ವಿದ್ಯಾರ್ಥಿಗಳಲ್ಲಿ ಕವಿಮನಸ್ಸನ್ನು ಸೃಷ್ಟಿ ಮಾಡಲು ಚಿಗುರು ಕಾರ್ಯಕ್ರಮ ಪೂರಕ ಎಂದರು.
ವಕ್ಕಲೇರಿ ಸಮೂಹ ಸಂಪನ್ಮೂಲ ವ್ಯಕ್ತಿ ಆರ್. ವೀರಣ್ಣಗೌಡ ಮಾತನಾಡಿ ನವೆಂಬರ್ 14 ರಂದು ಕಲಿಕೋತ್ಸವವನ್ನು ಎಲ್ಲಾ ಶಾಲೆಗಳಲ್ಲಿ ಹಮ್ಮಿಕೊಂಡಿದ್ದು, ನಾಟಕ, ಜ್ಞಾನ, ಕಲಿಕೆ, ಲೆಕ್ಕಾಚಾರ ಸಂಬಂಧಿಸಿದಂತೆ ಹತ್ತು-ಹಲವಾರು ವಿವಿಧ ಆಯಾಮಗಳ ಪ್ರತಿಬೆಗಳನ್ನು ಗುರುತಿಸುವ ಕಾರ್ಯದಲ್ಲಿ ಶಿಕ್ಷಕರು ವಿದ್ಯಾರ್ಥಿಗಳನ್ನು ತಯಾರು ಮಾಡಬೇಕೆಂದು ತಿಳಿಸಿದರು.
ಜಾನಪದ ಗೀತೆಗಳ ವಿಜೇತ ವಿದ್ಯಾರ್ಥಿಗಳಾದ ಮಾನಸ, ಪವಿತ್ರ, ಮೋನಿಕ, ಅನಿಲ್ಕುಮಾರ್ ಮತ್ತು ಸಂಗಡಿಗರು ಜಾನಪದ ಗೀತಗಾಯನವನ್ನು ಹಾಡಿ ರಂಜಿಸಿದರು. ಮುಖ್ಯ ಶಿಕ್ಷಕ ಬಸವರಾಜ ಸ್ವಾಗತಿಸಿ, ಸಹ ಶಿಕ್ಷಕಿ ಕೆ.ಆರ್. ಹೇಮಾವತಿ ವಂದಿಸಿದರು.