ಗುಂಡು ತಾಗಿ ಬಾಲಕನಿಗೆ ಗಾಯ
ಕೋಲಾರ: ಕ್ಷುಲ್ಲಕ ಕಾರಣಕ್ಕೆ ಬಾಲಕನೊಬ್ಬ ಗುಂಡೇಟಿನಿಂದ ಗಾಯಗೊಂಡಿರುವ ಘಟನೆ ನಗರದ ಕಾಳಮ್ಮ ಗುಡಿ ಬೀದಿಯಲ್ಲಿ ನಡೆದಿದೆ. ಗಾಯಗೊಂಡಿರುವ ಬಾಲಕನನ್ನು ಕಾರ್ತಿಕ್(15) ಎಂದು ಗುರುತಿಸಲಾಗಿದೆ.
ಘಟನೆಗೆ ಕಾರಣರಾದ ಶಿವಶಕ್ತಿ ಬ್ಯಾಂಗಲ್ಸ್ನ ಮಾಲೀಕ ಸುಭಾಷ್ಚಂದ್ರ ಗುಪ್ತ ಹಾಗೂ ಅಗಂಡಿಯ ಕೆಲಸಗಾರ ಮಲ್ಕಾನ್ಸಿಂಗ್ ಅವರನ್ನು ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಬಂಧಿಸಿದ್ದಾರೆ.
ಘಟನೆಯ ವಿವರ: ಗಾಯಾಳು ಮನೆಯವರಿಗೂ ಮತ್ತು ಶಿವಶಕ್ತಿ ಬ್ಯಾಂಗಲ್ಸ್ನ ಮಾಲೀಕನಿಗೂ ಇದ್ದ ವೈಷಮ್ಯ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಮಕ್ಕಳು ಅಂಗಡಿ ಮುಂದೆ ಆಟವಾಡುವಾಗ ಗಲಾಟೆ ಮಾಡುತ್ತಿದ್ದರು ಎಂಬ ಕೋಪವಿತ್ತು ಎನ್ನಲಾಗಿದೆ. ಬ್ಯಾಂಗಲ್ಸ್ ಸ್ಟೋರ್ ಮಾಲೀಕ ಬಲು ಮುಂಗೋಪಿ. ಮಂಗಳವಾರ ಅಂಗಡಿ ಮುಂದೆ ಆಟವಾಡುತ್ತಿದ್ದ ಕಾರ್ತಿಕ್ನನ್ನು ಭಯಪಡಿಸುವ ಸಲುವಾಗಿ ಏರ್ಗನ್ನಿಂದ ಗುಂಡು ಹಾರಿಸುವಂತೆ ತನ್ನ ಅಂಗಡಿಯ ಕೆಲಸಗಾರ ಮಲ್ಕಾನ್ಸಿಂಗ್ಗೆ ಸೂಚಿಸಿದ್ದಾನೆ.
ಮಾಲೀಕನ ಆದೇಶದಂತೆ ಏರ್ಗನ್ನಿಂದ ಗುಂಡು ಹಾರಿಸಿದಾಗ ಅದು ಕಾರ್ತಿಕ್ನ ಬಲ ತೊಡೆಗೆ ತಾಕಿದೆ. ಗಾಯಾಳು ಬಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೃಷಿ ಸಾಲ: ರೈತ ನೇಣಿಗೆ ಶರಣು
ಕೋಲಾರ: ಕೊಳವೆಬಾವಿ ಕೊರೆಸಲು ಪಡೆದಿದ್ದ ಸಾಲ ಮರು ಪಾವತಿಸಲಾಗದೆ ರೈತನೊಬ್ಬ ನೇಣಿಗೆ ಶರಣಾಗಿರುವ ಘಟನೆ ತಾಲೂಕಿನ ಕಿತ್ತಂಡೂರು ಗ್ರಾಮದಲ್ಲಿ ನಡೆದಿದೆ. ರೈತ ವೆಂಕಟಪ್ಪ(41) ಮೃತರು. ಇವರು 10 ವರ್ಷಗಳ ಹಿಂದೆ ಸುಮಾರು 5 ಎಕರೆ ಪ್ರದೇಶದಲ್ಲಿ ಟೊಮೇಟೊ, ಆಲೂಗಡ್ಡೆ, ರೇಷ್ಮೆ ಬೆಳೆಯುತ್ತಿದ್ದರು.
ಆದರೆ, ಕೊಳವೆಬಾವಿಗಳು ಬತ್ತಿ ಹೋದ ಕಾರಣ ಬ್ಯಾಂಕ್ ಮತ್ತು ಖಾಸಗಿಯಾಗಿ ಪಡೆದಿದ್ದ 7 ಲಕ್ಷ ರು. ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೃಷಿಗಾಗಿ ವೆಂಕಟಪ್ಪ ಎರಡು ಕೊಳವೆಬಾವಿ ಕೊರೆಸಿದ್ದರು. ಆದರೆ, ಎರಡೂ ಬಾವಿಗಳು ಬತ್ತಿ ಹೋಗಿದ್ದರಿಂದ ಮತ್ತೊಂದು ಕೊಳವೆಬಾವಿ ಕೊರೆಸಲು ಸಾಲ ಮಾಡಿದ್ದರು.
ಇದು ಸಹ ವಿಫಲವಾದ್ದರಿಂದ ಮನನೊಂದು ಈ ಕೃತ್ಯ ಎಸಗಿಕೊಂಡಿದ್ದಾರೆ ಎನ್ನಲಾಗಿದೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಟೌವ್ ಸಿಡಿದು ಮಹಿಳೆ ಸಾವು
ಬಂಗಾರಪೇಟೆ: ಸ್ಟೌವ್ ಸಿಡಿದು ಗೃಹಿಣಿಯೊಬ್ಬಳು ಮೃತಪಟ್ಟ ಘಟನೆ ತಾಲೂಕಿನ ತಿಮ್ಮೇನಹಳ್ಳಿಯಲ್ಲಿ ನಡೆದಿದೆ. ಮೃತ ಮಹಿಳೆ ಆಶಾರಾಣಿ. ಮನೆಯಲ್ಲಿ ಅಡುಗೆ ಮಾಡಲು ಸೀಮೆ ಎಣ್ಣೆ ಸ್ಟೌವ್ ಹಚ್ಚುವಾಗ ಆಕಸ್ಮಿಕವಾಗಿ ಸ್ಟೌ ಸಿಡಿದು ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾಳೆ. ಆಕೆಯನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾರೆ.