ಗುಂಡು ತಾಗಿ ಬಾಲಕನಿಗೆ ಗಾಯ
ಕೋಲಾರ: ಕ್ಷುಲ್ಲಕ ಕಾರಣಕ್ಕೆ ಬಾಲಕನೊಬ್ಬ ಗುಂಡೇಟಿನಿಂದ ಗಾಯಗೊಂಡಿರುವ ಘಟನೆ ನಗರದ ಕಾಳಮ್ಮ ಗುಡಿ ಬೀದಿಯಲ್ಲಿ ನಡೆದಿದೆ. ಗಾಯಗೊಂಡಿರುವ ಬಾಲಕನನ್ನು ಕಾರ್ತಿಕ್(15) ಎಂದು ಗುರುತಿಸಲಾಗಿದೆ.
ಘಟನೆಗೆ ಕಾರಣರಾದ ಶಿವಶಕ್ತಿ ಬ್ಯಾಂಗಲ್ಸ್‌ನ ಮಾಲೀಕ ಸುಭಾಷ್‌ಚಂದ್ರ ಗುಪ್ತ ಹಾಗೂ ಅಗಂಡಿಯ ಕೆಲಸಗಾರ ಮಲ್ಕಾನ್‌ಸಿಂಗ್ ಅವರನ್ನು ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಬಂಧಿಸಿದ್ದಾರೆ.
ಘಟನೆಯ ವಿವರ: ಗಾಯಾಳು ಮನೆಯವರಿಗೂ ಮತ್ತು ಶಿವಶಕ್ತಿ ಬ್ಯಾಂಗಲ್ಸ್‌ನ ಮಾಲೀಕನಿಗೂ ಇದ್ದ ವೈಷಮ್ಯ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಮಕ್ಕಳು ಅಂಗಡಿ ಮುಂದೆ ಆಟವಾಡುವಾಗ ಗಲಾಟೆ ಮಾಡುತ್ತಿದ್ದರು ಎಂಬ ಕೋಪವಿತ್ತು ಎನ್ನಲಾಗಿದೆ. ಬ್ಯಾಂಗಲ್ಸ್ ಸ್ಟೋರ್ ಮಾಲೀಕ ಬಲು ಮುಂಗೋಪಿ. ಮಂಗಳವಾರ ಅಂಗಡಿ ಮುಂದೆ ಆಟವಾಡುತ್ತಿದ್ದ ಕಾರ್ತಿಕ್‌ನನ್ನು ಭಯಪಡಿಸುವ ಸಲುವಾಗಿ ಏರ್‌ಗನ್‌ನಿಂದ ಗುಂಡು ಹಾರಿಸುವಂತೆ ತನ್ನ ಅಂಗಡಿಯ ಕೆಲಸಗಾರ ಮಲ್ಕಾನ್‌ಸಿಂಗ್‌ಗೆ ಸೂಚಿಸಿದ್ದಾನೆ.
ಮಾಲೀಕನ ಆದೇಶದಂತೆ ಏರ್‌ಗನ್‌ನಿಂದ ಗುಂಡು ಹಾರಿಸಿದಾಗ ಅದು ಕಾರ್ತಿಕ್‌ನ ಬಲ ತೊಡೆಗೆ ತಾಕಿದೆ. ಗಾಯಾಳು ಬಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.