ಚಿಕ್ಕಬಳ್ಳಾಪುರದಲ್ಲಿ ಏಕೈಕ ಮಹಿಳಾ ಅಭ್ಯರ್ಥಿ
ಬಿಎಸ್‌ಪಿಯಿಂದ ಸ್ಪರ್ಧಿಸಿರುವ ಚಿತ್ರಾ ಪ್ರಸಾದ್, ಅನಿತಾ ಕುಮಾಸ್ವಾಮಿ ಸ್ವಲ್ಪದರಲ್ಲೇ ಮಿಸ್
ಎನ್. ವೆಂಕಟೇಶ್
ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ, ಏ.1
ಮಾಜಿ ಮುಖ್ಯಮಂತ್ರಿಗಳಿಬ್ಬರ ತೀವ್ರ ಕುತೂಹಲ ಕದನಕ್ಕೆ ಕಾರಣವಾಗಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಏಕೈಕ ಮಹಿಳಾ ಅಭ್ಯರ್ಥಿ ಇದ್ದಾರೆ. ಅವರೇ ಬಿಎಸ್‌ಪಿಯ 42 ವರ್ಷದ ಚಿತ್ರಾ ಪ್ರಸಾದ್
ಖಾಸಗಿ ಸಂಸ್ಥೆಯಲ್ಲಿ ಲೆಕ್ಕಪರಿಶೋಧಕಿಯಾಗಿರುವ ಚಿತ್ರಾ ಪ್ರಸಾದ್ ಬೆಂಗಳೂರಿನ ಇಂದಿರಾ ನಗರದ ವಾಸವಾಗಿದ್ದಾರೆ. ಇವರ ಪತಿ ಗುರುಪ್ರಸಾದ್ ಅವರು ಉಪನ್ಯಾಸಕರು ಮತ್ತು ಸಮಾಜಸೇವಕರಾಗಿದ್ದಾರೆ. ಮಾ.25 ರಂದು ತಮ್ಮ ಪಕ್ಷದ ಮುಖಂಡರೊಂದಿಗೆ ಆಗಮಿಸಿ ಜಿಲ್ಲಾ ಚುನಾವಣಾಧಿಕಾರಿಗಳಿಗೆ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ ಚಿತ್ರಾ ಪ್ರಸಾದ್ ಪ್ರಾರಂಭದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಗರ್ಜನೆ ಮಾಡಿದರು. ಆ ನಂತರ ಯಾಕೋ ಜಿಲ್ಲೆಯಲ್ಲಿ ಇವರ ಮುಖದರ್ಶನ ಕಡಿಮೆಯಾಯಿತು. ಇನ್ನೂ ಬಿಎಸ್ ಪಿ ಅಭ್ಯರ್ಥಿ ಮತದಾರರನ್ನು ತಮ್ಮತ್ತ ಸೆಳೆದುಕೊಳ್ಳಲು ಅದ್ದೂರಿ ಪ್ರಚಾರವನ್ನು ಕೈಗೊಳ್ಳುವಲ್ಲಿ ಇನ್ನೂ ಸಮರ್ಪಕವಾಗಿ ಚಾಲನೆ ನೀಡಿಲ್ಲ. ಕಾಂಗ್ರೆಸ್‌ನ ಭದ್ರಕೋಟೆಯಾಗಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಇದುವರೆಗೂ ಮಹಿಳೆಯರಾರೂ ಸಂಸದರಾಗಿ ಆಯ್ಕೆಯಾಗಿಯೇ ಇಲ್ಲ. ಕ್ಷೇತ್ರ ರಚನೆಯಾದ 1977 ರಿಂದಲೂ ಎಲ್ಲಾ ಪುರುಷರೇ ಇಲ್ಲಿ ಸಂಸದರಾಗಿ ಮೆರೆದಿದ್ದಾರೆ. ಈ ಬಾರಿ ಈ ದಾಖಲೆಯನ್ನು ಮುರಿಯವುದು ದೊಡ್‌ಡ ಕಠಿಣ ಸವಾಲೇ ಸರಿ.
ಅನಿತಾ ಜಸ್ಟ್ ಮಿಸ್: ಅಂದುಕೊಂಡಂತೆ ನಡೆದಿದ್ದರೆ ಕ್ಷೇತ್ರದಲ್ಲಿ ಚಿತ್ರಾ ಪ್ರಸಾದ್ ಜೊತೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಚುನಾವಣೆಯಲ್ಲಿ ಸ್ಪರ್ಧಿಸಬೇಕಾಗಿತ್ತು. ಪ್ರಾರಂಭದಲ್ಲಿ ಜೆಡಿಎಸ್‌ನಿಂದ ಇವರು ಸ್ಪರ್ಧಿಸುವುದು ಖಚಿತ ಎಂದೇ ಹೇಳಲಾಗಿತ್ತು. ಆದರೆ, ಅನಾರೋಗ್ಯ ಜೊತೆಗೆ ರಾಜಕೀಯ ನಾನಾ ಕಾರಣಗಳಿಂದಾಗಿ ಅನಿತಾ ಕುಮಾರಸ್ವಾಮಿ ಸ್ಪರ್ಧೆಯಿಂದ ಹಿಂದೆ ಸರಿದರು. ಅವರ ಬದಲಿಗೆ ಕುಮಾರಸ್ವಾಮಿ ಅವರೇ ಈಗ ಅಭ್ಯರ್ಥಿಯಾಗಿದ್ದಾರೆ.
ಆಸ್ತಿ ಎಷ್ಟು?
ತಮ್ಮ ಬಳಿ 6 ಲಕ್ಷ, ಬ್ಯಾಂಕಿನಲ್ಲಿ 1.20 ಲಕ್ಷ, 60 ಸಾವಿರ ಬಾಂಡ್, ಎಲ್‌ಐಸಿಯಲ್ಲಿ 4 ಲಕ್ಷ ತೊಡಗಿಸಿದ್ದಾರೆ. ಅಲ್ಲದೆ, 30 ಸಾವಿರ ಮೌಲ್ಯದ ದ್ವಿಚಕ್ರ ವಾಹನ, 500 ಗ್ರಾಂ ಬೆಳ್ಳಿ ಮತ್ತು 100 ಬಂಗಾರವನ್ನು ಹೊಂದಿದ್ದಾರೆ. ಇನ್ನೂ ಇವರಿಗೆ ಕೃಷಿ ಭೂಮಿ ಇಲ್ಲ. ಬೆಂಗಳೂರಿನಲ್ಲಿ 28 ಲಕ್ಷ ಮೌಲ್ಯದ ಕಟ್ಟಡ ಹೊಂದಿದ್ದು, 18 ಲಕ್ಷ ಸಾಲ ಹೊಂದಿದ್ದಾರೆ.