ಮುಗೀತು ಹಬ್ಬ; ಇನ್ನು ಪ್ರಚಾರ ಅಬ್ಬರ
ಪಕ್ಷೇತರ ಅಭ್ಯರ್ಥಿಗಳನ್ನು ನಿವೃತ್ತಗೊಳಿಸಲು ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ನಿಂದ ಕಸರತ್ತು
ಕನ್ನಡಪ್ರಭ ವಾರ್ತೆ, ಕೋಲಾರ, ಏ.1
ಯುಗಾದಿ ಸಂಭ್ರಮ ಮುಗಿದಿದೆ. ಇನ್ನೇನಿದ್ದರು ಚುನಾವಣೆಯ ಕಾವು!
ಹಬ್ಬದ ಸಂದರ್ಭದಲ್ಲಿ ಮತ ಬೇಟೆಗೆ ಹೋದರೆ ವೀಕ್ಷಕರ ಕಣ್ಣಿಗೆ ಬಿದ್ದು ತಾಪತ್ರಯ ಪಡಬೇಕಾಗುತ್ತದೆ ಎಂದು ರಹಸ್ಯ ಕಾರ್ಯಾಚರಣೆ ಕೈಗೊಂಡಿದ್ದ ಪ್ರಮುಖ ಅಭ್ಯರ್ಥಿಗಳು ಬುಧವಾರದಿಂದ ರಣರಂಗಕ್ಕೆ ಧುಮುಕಲು ಸಜ್ಜಾಗುತ್ತಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್. ಮುನಿಯಪ್ಪ, ಬಿಜೆಪಿಯ ಎಂ.ನಾರಾಯಣಸ್ವಾಮಿ, ಜೆಡಿಎಸ್‌ನ ಕೆ.ಕೇಶವ, ಆಪ್‌ನ ಕೋಟಗಾನಹಳ್ಳಿ ರಾಮಯ್ಯ ಅವರು ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು. ಕಣದಲ್ಲಿ ಒಟ್ಟು 22 ಮಂದಿ ಉಳಿದಿದ್ದು, ಈ ಪೈಕಿ ಕೆಲವು ಪಕ್ಷೇತರ ಅಭ್ಯರ್ಥಿಗಳನ್ನು ಕಣದಿಂದ ನಿವೃತ್ತಿಗೊಳಿಸಲು ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಕಸರತ್ತು ನಡೆಸುತ್ತಿದ್ದಾರೆ.
ಛಲವಾದಿ ಮಹಾಸಭೆಯ ಸಂಸ್ಥಾಪಕ ಕೆ. ಶಿವರಾಂ ಕೆಲವು ತಿಂಗಳ ಹಿಂದೆ ಛಲವಾದಿ ಮಹಾಸಭಾದ ಸಂಘಟನೆಗಾಗಿ ಕೋಲಾರಕ್ಕೆ ಬಂದಿದ್ದಾಗ ಕೋಲಾರದಲ್ಲಿ ಮುನಿಯಪ್ಪ ಅವರನ್ನು ಬೆಂಬಲಿಸುವುದಾಗಿ ಹೇಳಿದ್ದರು. ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗದಿದ್ದರಿಂದ ಬಿಜಾಪುರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಹಾಗಾಗಿ, ಅವರ ಬೆಂಬಲ ಮುನಿಯಪ್ಪ ಅವರಿಗೆ ಸಿಗುವುದೇ ಎಂಬ ಪ್ರಶ್ನೆ ಎದ್ದಿದೆ. ಆದರೆ, ರಾಜಕೀಯ ತಂತ್ರಗಾರಿಕೆ ಹೆಣೆಯುವಲ್ಲಿ ನಿಪುಣರಾಗಿರುವ ಕೆ.ಹೆಚ್.ಮುನಿಯಪ್ಪ ಛಲವಾದಿ ಸಂಘಟನೆ ಇಬ್ಬಾಗವಾಗಿರುವುದರಿಂದ ಕೆ.ಶಿವರಾಂ ವಿರೋಧಿ ಬಣದೊಂದಿಗೆ ಮಾತುಕತೆ ನಡೆಸಿ ಜಿಲ್ಲೆಯಲ್ಲಿನ ಛಲವಾದಿಗಳ ಬೆಂಬಲ ಪಡೆಯಲು ಮುಂದಾಗಿದ್ದಾರೆ. ಕಾಂಗ್ರೆಸ್ಪ್‌ರವಾಗಿ ಬುಧಾರದಿಂದ ಹೋಬಳಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯಕರ್ತರ ಸಭೆಗಳು ಆಯೋಜಿಸಿದೆ.
ಜೆಡಿಎಸ್ ಪ್ರಯತ್ನ: ಜೆಡಿಎಸ್ ಅಭ್ಯರ್ಥಿ ಕೆ.ಕೇಶವ ಕ್ಷೇತ್ರಕ್ಕೆ ಹೊಸಬರಾಗಿದ್ದರೂ ಸ್ಥಳೀಯ ಮುಖಂಡರೊಂದಿಗೆ ಪ್ರಚಾರ ನಡೆಸುತ್ತಿದ್ದಾರೆ. ತಮ್ಮ ಬಳಿ ಹಣ ಇರುವುದರಿಂದಲೇ ಧೈರ್ಯವಾಗಿ ಕಣಕ್ಕೆ ಇಳಿದಿದ್ದೇನೆಂದು ಹೇಳುತ್ತಾ ಕಾರ್ಯಕರ್ತರನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿದ್ದಾರೆ. ಇವರು ಮಾಲೂರಿನಲ್ಲಿ ಹೆಚ್ಚು ಮತ ಪಡೆಯಲು ಶಾಸಕ ಮಂಜುನಾಥಗೌಡರ ಮೊರೆ ಹೋಗಿದ್ದಾರೆ. ಚಿಂತಾಮಣಿ ಮತ್ತು ಶಿಡ್ಲಘಟ್ಟದಲ್ಲಿ ಜೆಡಿಎಸ್ ಶಾಸಕರು ಇರುವುದರಿಂದ ಗೆಲುವು ಸುಲಭ ಎಂದು ನಂಬಿದ್ದಾರೆ. ಮುನಿಯಪ್ಪನವರನ್ನು ಪ್ರಬಲವಾಗಿ ವಿರೋಧಿಸುತ್ತಿರುವ ಮಾಜಿ ಸಚಿವ ಕೆ.ಶ್ರೀನಿವಾಸಗೌಡ, ಮಾಜಿ ಶಾಸಕ ಡಾ.ಸುಧಾಕರ್ ಬೆಂಬಲ ಇವರಿಗಿದೆ.
ಮೋದಿ ಮೇಲೆ ನಂಬಿಕೆ: ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿ ಈ ಬಾರಿ ಮುನಿಯಪ್ಪನವರನ್ನು ಮೋದಿ ಅಲೆಯ ಆಧಾರದ ಮೇಲೆ ಸೋಲಿಸಬಹುದು ಎಂದು ಭಾವಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಕೆ.ಕೇಶವ ಸಹ ಭೋವಿ ಸಮುದಾಯಕ್ಕೆ ಸೇರಿರುವುದರಿಂದ ಮತಗಳು ವಿಭಜನೆ ಆಗಬಹುದೆಂದು ಆತಂಕಗೊಂಡಿದ್ದಾರೆ. ಬಿಜೆಪಿಯಲ್ಲಿನ ಗುಂಪುಗಾರಿಕೆ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ವೀರಯ್ಯ ಟಿಕೆಟ್ ಸಿಗದೆ ಇರುವುದರಿಂದ ಅಸಮಾಧಾನಗೊಂಡಿದ್ದಾರೆ. ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷ ಎನ್.ಲಕ್ಷ್ಮಯ್ಯ ಪ್ರಚಾರಕ್ಕೆ ಇಳಿದಿರುವುದರಿಂದ ಕೆಲವರು ವಿರೋಧಿಸುತ್ತಿರುವುದು ನಾರಾಯಣಸ್ವಾಮಿಯವರಿಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ.
ಆಪ್ ಕಾಂಹ್ ಹೈ?: ಇನ್ನು ರಾಜಕೀಯಕ್ಕೆ ಹೊಸದಾಗಿ ಎಂಟ್ರಿ ನೀಡಿರುವ ಸಾಹಿತಿ, ರಂಗ ಕರ್ಮಿ ಕೋಟಗಾನಹಳ್ಳಿ ರಾಮಯ್ಯ ಆಮ್ ಆದ್ಮಿ ಪಕ್ಷದ ಹುರಿಯಾಳು. ನೆಲ ದೇವತೆಗಳ ಹೆಜ್ಜೆಗಳು, ಭೂಮಿ ತತ್ವ ಹೇಗೆ ಅವರದೇ ಆದ ಚಿಂತನೆಗಳನ್ನು ಮತದಾರನಿಗೆ ತಿಳಿಸಿ ಮತಗಳಿಸುವುದಕ್ಕೆ ಹೊರಟಿದ್ದಾರೆ. ಪ್ರಚಾರಕ್ಕೆ ಹಣವನ್ನು ಜನರಿಂದಲೇ ಸಂಗ್ರಹಿಸುತ್ತಿದ್ದಾರೆ. ಅಗೋಚರ ಮತದಾರರನ್ನು ನಂಬಿದ್ದಾರೆ.