ಮುನಿಯಪ್ಪ ಕೇವಲ 'ರೈಲು' ಬಿಡ್ತಾರೆ: ಕೆ.ಕೇಶವ್ ವ್ಯಂಗ್ಯ
ಶಿಡ್ಲಘಟ್ಟ: ಕೋಲಾರ ಲೋಕಸಭಾ ಕ್ಷೇತ್ರದಲ್ಲಿ 30 ವರ್ಷಗಳಿಂದ ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಅವರು ದುಡಿಯುವ ಕೈಗಳಿಗೆ ಕೆಲಸ ನೀಡಲಿಲ್ಲ. ಯಾವುದೇ ಶಾಶ್ವತ ಕೆಲಸಗಳನ್ನು ಕೇವಲ 'ರೈಲು' ಬಿಟ್ಟು ಮತಗಳನ್ನು ಗಳಿಸಿರುವ ಇವರಿಗೆ ಚುನಾವಣೆಯಲ್ಲಿ ಜನ ತಕ್ಕಪಾಠ ಕಲಿಸಲಿದ್ದಾರೆ ಎಂದು ಕೋಲಾರ ಲೋಕಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೆ.ಕೇಶವ್ ಹೇಳಿದರು. ತಾಲೂಕಿನ ಈ ತಿಮ್ಮಸಂದ್ರ ಗ್ರಾಮದಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, 'ಕೈಗಾರಿಕೆ ಸಚಿವರಾಗಿರುವ ಮುನಿಯಪ್ಪ ಒಂದು ಲಕ್ಷ ಜನಕ್ಕೆ ಉದ್ಯೋಗಾವಕಾಶ ಕಲ್ಪಿಸುತ್ತೇನೆ ಎಂದಿದ್ದರು. ಆದರೆ, ಇದೀಗ ಎಷ್ಟು ಜನರಿಗೆ ಉದ್ಯೋಗ ಕೊಟ್ಟಿದ್ದಾರೆ' ಎಂದು ಪ್ರಶ್ನಿಸಿದರು. ಶಾಸಕ ಎಂ. ರಾಜಣ್ಣ, ಕೋಲಾರ ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಶಿವಾರೆಡ್ಡಿ, ಗ್ರಾಪಂ ಅಧ್ಯಕ್ಷ ಮೌಲಾಸಾಬ್, ಸದಸ್ಯ ಬೈರಾರೆಡ್ಡಿ, ಕೇಶವರೆಡ್ಡಿ, ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಆಯಿಷಾ ಸುಲ್ತಾನಾ ಮತ್ತಿತರರು ಉಪಸ್ಥಿತರಿದ್ದರು.
ಬಿಜೆಪಿಯಿಂದ ಹೈಟೆಕ್ ಪ್ರಚಾರ
ಕೋಲಾರ: ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ಬಿಜೆಪಿ ಅತ್ಯಾಧುನಿಕ ತಂತ್ರಗಾರಿಕೆಯನ್ನು ಬಳಸುವ ಮೂಲಕ ಮತದಾರರನ್ನು ಸೆಳೆಯಲು ಮುಂದಾಗಿದೆ.
ಪ್ರಚಾರಕ್ಕೆ ಹೈಟೆಕ್ ಸ್ಪರ್ಶ ನೀಡಿರುವ ಬಿಜೆಪಿ, ಮೋದಿ ಭಾಷಣವನ್ನು ಬಿತ್ತಿರಿಸುವ ಬೃಹತ್ ಪರದೆಯ ವಿಡಿಯೋ ವಾಹನಕ್ಕೆ ನಗರದ ಡೂಂ ಲೈಟ್ ವೃತ್ತದಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.
ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಸುಮಾರು 30 ನಿಮಿಷಗಳ ಕಾಲ ಮತದಾರರನ್ನುದ್ದೇಶಿಸಿ ಮಾಡಿರುವುದನ್ನು ಚಿತ್ರಿಕರಿಸಲಾಗಿದ್ದು, ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಬಿತ್ತರಿಸಲಾಗುತ್ತದೆ. ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ ಓಂಶಕ್ತಿ ಚಲಪತಿ, ಮುಖಂಡರಾದ ಜಯಂತಿಲಾಲ್, ಚಿನ್ನಾಪುರ ನಾರಾಯಣಸ್ವಾಮಿ, ವಿಜಯಕುಮಾರ್ ಮತ್ತಿತರರು ಚಾಲನೆ ನೀಡಿದರು.
ಪ್ರಮುಖರಾದ ಮುಕುಂದ್ ಈ ಕುರಿತು ಮಾಹಿತಿ ನೀಡಿ, ಮುದುವತ್ತಿ, ವಕ್ಕಲೇರಿ, ಜೋಡಿ ಕೃಷ್ಣಾಪುರ, ನರಸಾಪುರ, ಕ್ಯಾಲನೂರು ಕ್ರಾಸ್, ವೇಮಗಲ್, ತಲಗುಂದ, ಕೋಡಿಕಣ್ಣೂರು, ಶ್ರೀನಿವಾಸಪುರ ಟೋಲ್ ಗೇಟ್ಗಳಲ್ಲಿ ಮೋದಿ ಭಾಷಣ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಮೋದ್, ಮು.ರಾಘವೇಂದ್ರ, ನರಸಿಂಹಮೂರ್ತಿ, ಸುರೇಶ್, ಜಾವೀದ್ಉಲ್ಲಾ ಖಾನ್, ಪುನೀತ್, ಮಹೇಶ್ ಕದಂ, ಸಾ.ಮಾ.ಅನಿಲ್, ಮಂಜುನಾಥ್, ರವಿ ಇದ್ದರು.