ಮೈಕ್ರೋ ವೀಕ್ಷಕರಿಗೆ ತರಬೇತಿ
ಕೋಲಾರ: ಲೋಕಸಭಾ ಚುನಾವಣೆಗೆ ನಿಯೋಜನೆಗೊಂಡಿರುವ ಮೈಕ್ರೋ ವೀಕ್ಷಕರಿಗಾಗಿ ಏ.5ರಂದು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬಿಇಎಂಎಲ್ನ 577 ಅಧಿಕಾರಿಗಳನ್ನು ಮೈಕ್ರೋ ವೀಕ್ಷಕರಾಗಿ ನೇಮಿಸಿಕೊಂಡಿದ್ದು, ಇವರಿಗೆ ಏ.5ರಂದು ಮಧ್ಯಾಹ್ನ 12ರಿಂದ 2.30ರವರೆಗೆ ಹಾಗೂ ಕೆಜಿಎಫ್. ಮತ್ತು ಬಂಗಾರಪೇಟೆ ಕ್ಷೇತ್ರದ 235 ಇತರೆ ಅಧಿಕಾರಿಗಳಿಗೆ ಮಧ್ಯಾಹ್ನ 3 ಗಂಟೆಯಿಂದ ಸಂಜೆ 5.30ಗಂಟೆಯವರೆಗೆ ತರಬೇತಿ ನೀಡಲಾಗುತ್ತದೆ. ಕೋಲಾರ ಕ್ಷೇತ್ರಕ್ಕೆ ಆಯ್ಕೆಯಾಗಿರುವ ಮೈಕ್ರೋ ವೀಕ್ಷಕರಿಗೆ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಏ.6 ರಂದು ಬೆಳಿಗ್ಗೆ 10.30ಕ್ಕೆ ಹಾಗೂ ಮುಳಬಾಗಿಲು, ಶ್ರೀನಿವಾಸಪುರ ಮತ್ತು ಮಾಲೂರು ಕ್ಷೇತ್ರಗಳಿಗೆ ಆಯ್ಕೆಯಾಗಿರುವ ಅಂಚೆ ಇಲಾಖೆಯ ಅಧಿಕಾರಿಗಳಿಗೆ ಮಧ್ಯಾಹ್ನ 2.30ರಿಂದ 5.30ರವರೆಗೆ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ತರಬೇತಿಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಲೆಕ್ಕಪತ್ರ ಸಲ್ಲಿಸಲು ಅಭ್ಯರ್ಥಿಗಳಿಗೆ ಸೂಚನೆ
ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ದಿನನಿತ್ಯದ ಲೆಕ್ಕಪತ್ರಗಳನ್ನು ಸಲ್ಲಿಕೆ ಮಾಡದಿದ್ದರೆ ಪ್ರಜಾಪ್ರತಿನಿಧಿ ಕಾಯ್ದೆ 1951ರ ಪ್ರಕಾರ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ. ಅಭ್ಯರ್ಥಿಯ ಕಡೆಯ ಏಜೆಂಟರು ಏ.4, 6 ಹಾಗೂ 15 ಈ ದಿನಾಂಕಗಳಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಜಿಲ್ಲಾಧಿಕಾರಿಗಳ ನ್ಯಾಯಾಲಯದ ಸಭಾಂಗಣದಲ್ಲಿ ಹಾಜರಾಗಿ ವೆಚ್ಚ ಲೆಕ್ಕಪತ್ರಕ್ಕೆ ಸಂಬಂಧಿಸಿದಂತೆ ವಿವರಗಳನ್ನು ನೀಡಬೇಕೆಂದು ಸೂಚಿಸಿದ್ದಾರೆ.
ವಿದ್ಯುನ್ಮಾನ ಮತಯಂತ್ರ ಬಳಕೆ ಜಾಗೃತಿ
ಜಿಲ್ಲೆಯ ಮತದಾರರು ಇವಿಎಂ ಮುಖಾಂತರ ಮತ ಚಲಾಯಿಸಲು ಅರಿವು ಮತ್ತು ಜಾಗೃತಿ ಮೂಡಿಸುವ ಸಲುವಾಗಿ ಚುನಾವಣಾ ಸ್ವೀಪ್ವತಿಯಿಂದ ಏ.2 ರಿಂದ 14ರವರೆಗೆ ಬೆಳಿಗ್ಗೆ 9ಗಂಟೆಯಿಂದ ಸಂಜೆ 6ಗಂಟೆಯವರೆಗೆ ಕೋಲಾರ, ಶ್ರೀನಿವಾಸಪುರ, ಮುಳಬಾಗಿಲು, ಬಂಗಾರಪೇಟೆ, ಮಾಲೂರು ಮತ್ತು ಕೆಜಿಎಫ್ ಬಸ್ ನಿಲ್ದಾಣಗಳಲ್ಲಿ ಇವಿಎಂ ಮೂಲಕ ಮತ ಚಲಾಯಿಸುವ ಬಗ್ಗೆ ಪ್ರದರ್ಶನ ನೀಡಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.