ಆಲಂಬಗಿರಿಯಲ್ಲಿ ಸಂಭ್ರಮದ ಯುಗಾದಿ ಆಚರಣೆ
ಚಿಂತಾಮಣಿ: ತಾಲೂಕಿನ ಪುರಾತನ ಕ್ಷೇತ್ರವಾದ ಆಲಂಬಗಿರಿ ಕಲ್ಕಿ ಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯದಲ್ಲಿ ನೂತನ ಜಯನಾಮ ಸಂವತ್ಸರದ ಯುಗಾದಿ ಹಬ್ಬವನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಯಿತು. ಬೆಳಗಿನಿಂದಲೇ ಭಕ್ತಾಧಿಗಳು ವಿಶೇಷ ಪೂಜೆಗಳನ್ನು ನೆರವೇರಿಸಿದರು. ಪಂಚಾಂಗಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಿ ಅರ್ಚಕ ವೃಂದ ಮಂತ್ರಘೋಷದೊಂದಿಗೆ ಪಂಚಾಂಗ ಶ್ರವಣ ಮಾಡಿದರು. ಈ ಸಂದರ್ಭದಲ್ಲಿ ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ. ಎಂ.ಆರ್.ಜಯರಾಮು ಅವರು ಭಾಗವಹಿಸಿದ್ದರು. ಯುಗಾದಿ ಪ್ರಯುಕ್ತ ವಿಶೇಷ ಪ್ರಾಕಾರೋತ್ಸವವನ್ನು ಏರ್ಪಡಿಸಲಾಗಿತ್ತು. ಆಲಂಬಗಿರಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಪ್ರಮುಖರು ಮತ್ತು ಭಕ್ತಾಧಿಗಳು ಪಂಚಾಂಗ ಶ್ರವಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವಾಮಿ ಕೃಪೆಗೆ ಪಾತ್ರರಾದರು.