ಒತ್ತಡದ ನಡುವೆಯೂ ಸಮರ್ಪಕ ಕರ್ತವ್ಯ ನಿರ್ವಹಿಸಿ
ಚಿಕ್ಕಬಳ್ಳಾಪುರ: ಒತ್ತಡದಲ್ಲಿ ಕಾರ್ಯ ನಿರ್ವಹಿಸುವುದು ಕಷ್ಟಕರವಾಗಿದ್ದರೂ ಪೊಲೀಸರು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿಯೇ ನಿರ್ವಹಿಸಬೇಕು. ಈ ಮೂಲಕ ಸಮಾಜದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡಬೇಕೆಂದು ಜಿಲ್ಲಾ ರಕ್ಷಣಾಧಿಕಾರಿ ದಿವ್ಯ ಗೋಪಿನಾಥ್ ಸಲಹೆ ನೀಡಿದರು.
ನಗರದ ಕವಾಯತು ಮೈದಾನದಲ್ಲಿ ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ಪೊಲೀಸ್ ಧ್ವಜ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ಪೊಲೀಸರು ಹೆಚ್ಚಿನ ಜವಾಬ್ದಾರಿ ಹೊಂದಿದ್ದಾರೆ. ಕಾನೂನು ರಕ್ಷಕರಾಗಿ ಬಿಡುವಿಲ್ಲದೇ ಕೆಲಸ ಮಾಡಬೇಕು. ಪ್ರಮುಖವಾಗಿ ಹೆಚ್ಚಿಗೆ ಒತ್ತಡ ಕಾಡುತ್ತಿರುತ್ತದೆ. ಆದರೂ ಸಮಾಜದ ಹಿತದೃಷ್ಟಿಯಿಂದ ಉತ್ತಮವಾಗಿ ಕಾರ್ಯ ನಿರ್ವಹಿಸಬೇಕಾಗಿರುವುದು ಅನಿವಾರ್ಯ ಎಂದ ಅವರು, ಕಿರಿಯ ಅಧಿಕಾರಿಗಳು ಅಗತ್ಯವಿದ್ದಾಗ ನಿವೃತ್ತ ಅಧಿಕಾರಿಗಳಿಂದ ಅಗತ್ಯವಿರುವ ಮಾರ್ಗದರ್ಶನ, ಸಲಹೆ ಪಡೆದುಕೊಳ್ಳಬೇಕು. ಹಿಂದೆ ಅವರು ಕರ್ತವ್ಯ ನಿರ್ವಹಣೆಯಲ್ಲಿ ಸಾಕಷ್ಟು ಬಾರಿ ನಿಭಾಯಿಸಿದ ಕಷ್ಟಕರ ಪರಿಸ್ಥಿತಿಗಳ ಬಗ್ಗೆ ತಿಳಿದುಕೊಳ್ಳಬೇಕು. ಅದರಂತೆ ತಾವು ಸಹ ದಿಟ್ಟ ರೀತಿಯಲ್ಲಿ ಕೆಲಸ ಮಾಡಿ ಹೆಸರನ್ನು ಪಡೆದುಕೊಳ್ಳಬೇಕು. ಸದಾ ಪೊಲೀಸ್ ಇಲಾಖೆ ಇಂತಹ ಅಧಿಕಾರಿಗಳನ್ನೇ ನಿರೀಕ್ಷಿಸುತ್ತದೆ ಎಂದರು.
ನಿವೃತ್ತ ಡಿವೈಎಸ್ಪಿ ದೇವಯ್ಯ ಮಾತನಾಡಿ, ಇತ್ತೀಚೆಗೆ ಸಾಕಷ್ಟು ಅಪರಾಧ ಪ್ರಕರಣಗಳಲ್ಲಿ ಕೈಗೊಳ್ಳಲಾಗುತ್ತಿರುವ ತನಿಖೆ ಮಟ್ಟ ತೃಪ್ತಿದಾಯಕವಾಗಿ ನಡೆಯುತ್ತಿಲ್ಲ. ಇದಕ್ಕೆ ಅನೇಕ ಕಾರಣಗಳಿದ್ದು ಪೊಲೀಸ್ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ, ತರಬೇತಿ ನೀಡುವಂತಹ ಕೆಲಸ ಹೆಚ್ಚಿಗೆ ಆಗಬೇಕು. ವ್ಯವಸ್ಥೆಯಲ್ಲೂ ಬದಲಾವಣೆ ತರಬೇಕಾಗಿರುವುದರ ಜೊತೆಗೆ ಅಧಿಕಾರಿಗಳ ಸಮಸ್ಯೆಗಳನ್ನು ಬಗೆಹರಿಸುವಂತಹುದು ಅತ್ಯಗತ್ಯ ಎಂದರು. ಡಿವೈಎಸ್ಪಿ ಚಿನ್ನಸ್ವಾಮಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.