ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕಾಂಗ್ರೆಸ್ ಪರ ಪ್ರಚಾರಕ್ಕೆವರ್ತೂರ್‌ಗೆ ಸಿಎಂ ಸೂಚನೆ

Rashmi Kasaragodu
Updated On : 3 Apr 2014, 1:06 am

ಕೋಲಾರ: ಲೋಕಸಭಾ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ರಾಜಕೀಯ ರಂಗು ಬಿರುಸುಗೊಳ್ಳುತ್ತಿದೆ.
 ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್. ಮುನಿಯಪ್ಪನವರಿಗೆ ಈ ಬಾರಿ ವಿಶ್ರಾಂತಿ ನೀಡಬೇಕೆಂದು ಜೆಡಿಎಸ್ ಮುಖಂಡರು ಪ್ರಯತ್ನಿಸುತ್ತಿರುವುದರಿಂದ ಪ್ರತಿತಂತ್ರ ರೂಪಿಸಲು ಕಾಂಗ್ರೆಸ್ ಮುಖಂಡರು ಹರ ಸಾಹಸ ಮಾಡುತ್ತಿದ್ದಾರೆ.
ಕಾಂಗ್ರೆಸ್‌ಗೆ  ತನ್ನನ್ನು ಸೇರಿಸಿಕೊಳ್ಳಲು ಕೆ.ಎಚ್. ಮುನಿಯಪ್ಪ ಸೇರಿದಂತೆ ಹಲವರು ಅಡ್ಡಗಾಲು ಹಾಕಿದ್ದಾರೆಂದು ಮುನಿಸಿಕೊಂಡು ಕಳೆದ ಏಳೆಂಟು ತಿಂಗಳಿಂದ ವ್ಯವಸಾಯದತ್ತ ಗಮನ ಹರಿಸಿದ್ದ ಕೋಲಾರ ಶಾಸಕ ವರ್ತೂರ್ ಪ್ರಕಾಶ್ ಈಗ ಚರ್ಚೆಗೆ ಗ್ರಾಸವಾಗಿದ್ದಾರೆ.
ಕೆ.ಎಚ್. ಮುನಿಯಪ್ಪ ವರ್ತೂರ್ ಪ್ರಕಾಶ್ ಅವರನ್ನು ತಮ್ಮ ಕ್ಯಾಂಪಿಗೆ ಸೇರಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ಮಾಜಿ ಶಾಸಕ ಡಾ. ಸುಧಾಕರ್, ಶಾಸಕರಾದ ಕೋಡಿಹಳ್ಳಿ ಮಂಜುನಾಥ್ ಅವರು ವರ್ತೂರ್ ಪ್ರಕಾಶ್ ಅವರನ್ನು ಜೆಡಿಎಸ್‌ಗೆ ಸೆಳೆಯಲು ಪ್ರಯತ್ನಿಸುತ್ತಿರುವುದರ ಬಗ್ಗೆ ವಾಸನೆ ಅರಿತ ಮುನಿಯಪ್ಪನವರು ಜೆಡಿಎಸ್ ಕಡೆ ವಾಲದಂತೆ ಎಚ್ಚರವಹಿಸಿದ್ದಾರೆ. ಈ ನಡುವೆ ತಮ್ಮನ್ನು ಎರಡು ಬಾರಿ ಭೇಟಿ ಮಾಡಿರುವ ಶಾಸಕ ವರ್ತೂರ್ ಪ್ರಕಾಶ್‌ಗೆ ಕಾಂಗ್ರೆಸ್ ಪರ ಪ್ರಚಾರ ಮಾಡಿದಲ್ಲಿ ಚುನಾವಣೆ ನಂತರ ಸೂಕ್ತವಾದ ಸ್ಥಾನಮಾನ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಕಾಂಗ್ರೆಸ್ ಪರ ಕೆಲಸ ಮಾಡಲು ತಾತ್ವಿಕವಾಗಿ ಸಿದ್ಧರಿರುವ ವರ್ತೂರ್ ಪ್ರಕಾಶ್, ಕೆ.ಎಚ್. ಮುನಿಯಪ್ಪನವರಿಂದ ಪೂರಕವಾದ ಆಹ್ವಾನ ಮತ್ತು ಸಹಕಾರ ನಿರೀಕ್ಷೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳ ಭೇಟಿಯ ನಂತರ ತಮ್ಮನ್ನು ಕಾಂಗ್ರೆಸ್ಸಿಗೆ ಸೇರಿಕೊಳ್ಳಲು ಅಡ್ಡಗಾಲು ಆಗಿರುವ ವಿಧಾನಪರಿಷತ್ ಸದಸ್ಯ ನಜೀರ್ ಅಹಮ್ಮದ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಜತೆಗೆ ಶಾಸಕರಾದ ರಮೇಶ್ ಕುಮಾರ್, ಕೆ.ಎಂ.ನಾರಾಯಣಸ್ವಾಮಿ, ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಸೇರಿದಂತೆ ಜಿಲ್ಲೆಯ ಕೆಲವು ಹಿರಿಯ ಕಾಂಗ್ರೆಸ್ ಮುಖಂಡರನ್ನು ಭೇಟಿಯಾಗಿ ಕಾಂಗ್ರೆಸ್ ಪರ ಕೆಲಸ ಮಾಡುವ ಬಗ್ಗೆ ಸುಳಿವು ನೀಡಿದ್ದಾರೆ. ನಾಳೆ ನಡೆಯುವ ಸಭೆಯಲ್ಲಿ ವರ್ತೂರ್ ಪ್ರಕಾಶ್ ಬೆಂಬಲಿಗರು ಕಾಂಗ್ರೆಸ್ ಪರ ಕೆಲಸ ಮಾಡದಂತೆ ಹೇಳಿದಲ್ಲಿ ಈಗಾಗಲೇ ಒಂದು ಕಾಲು ಹಿಂದಕ್ಕೆ ಇಟ್ಟಿರುವ ವರ್ತೂರ್ ಬಣದಲ್ಲಿ ಗುರುತಿಸಿಕೊಂಡಿರುವ ಪ್ರಮುಖ ವಕ್ಕಲಿಗ ಮುಖಂಡರು ಹಾಗೂ ಅಹಿಂದ ವರ್ಗದವರು ಶಾಸಕರ ವಿರುದ್ಧ ಬಂಡಾಯವೆದ್ದು ಹೊರ ಬರುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement