ಕೋಲಾರ, ಪುರುಷರದ್ದೇ ದರ್ಬಾರ್
ಪಾ.ಶ್ರೀ. ಅನಂತರಾಮ್
ಕನ್ನಡಪ್ರಭ ವಾರ್ತೆ, ಕೋಲಾರ, ಏ.2
ಪರಿಶಿಷ್ಟ ಜಾತಿಗೆ ಮೀಸಲಾದ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಪುರುಷರದ್ದೇ ಕಾರುಬಾರು. 1952ರಿಂದ 2009ರವರೆಗೆ ನಡೆದಿರುವ 15 ಚುನಾವಣೆಗಳಲ್ಲಿ ಮಹಿಳೆಯರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶಗಳೇ ಸಿಕ್ಕಿಲ್ಲ.
1958ರಲ್ಲಿ ಕೋಲಾರ ಜಿಲ್ಲೆಯಿಂದ ರಾಜ್ಯಸಭೆಗೆ ಕಾಂಗ್ರೆಸ್ ಪಕ್ಷದಿಂದ ಅನ್ನಪೂರ್ಣದೇವಿ ತಿಮ್ಮಾರೆಡ್ಡಿಯವರನ್ನು ಆಯ್ಕೆ ಮಾಡಿರುವುದು ಹೊರತು ಪಡಿಸಿದರೆ ಇನ್ಯಾರು ಲೋಕಸಭೆ ಇಲ್ಲವೇ ರಾಜ್ಯಸಭೆಗೆ ಆಯ್ಕೆಯಾಗಿಲ್ಲ.
ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡಬೇಕೆಂಬ ಕೂಗು ಕೇಳಿ ಬರುತ್ತಿದೆಯಾದರೂ ಯಾವುದೇ ಪಕ್ಷದವರು ಮೀಸಲು ಕ್ಷೇತ್ರದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯತೆ ಕಲ್ಪಿಸಲು ಧೈರ್ಯ ಮತ್ತು ಬದ್ಧತೆ ಪ್ರದರ್ಶಿಸಿಲ್ಲ.
1952ರಿಂದ 1962ರವರೆಗೆ ದ್ವಿಸದಸ್ಯತ್ವ ಕ್ಷೇತ್ರವಾಗಿದ್ದ ಕೋಲಾರದಿಂದ ಮೂರು ಬಾರಿ ಕಾಂಗ್ರೆಸ್ನಿಂದ ದೊಡ್ಡತಿಮ್ಮಯ್ಯ, ಎರಡು ಬಾರಿ ಎಂ.ವಿ. ಕೃಷ್ಣಪ್ಪ ಹಾಗೂ ಒಮ್ಮೆ ಕೆ. ಚಂಗಲರಾಯರೆಡ್ಡಿ ಆಯ್ಕೆಯಾಗಿದ್ದಾರೆ.
1962ರಲ್ಲಿ ಕೋಲಾರ ಮೀಸಲು ಲೋಕಸಭಾ ಕ್ಷೇತ್ರವಾದ ಬಳಿಕ ನಾಲ್ಕು ಬಾರಿ ಜಿ.ವೈ. ಕೃಷ್ಣನ್, 1984ರಲ್ಲಿ ಒಂದು ಬಾರಿ ಜನತಾಪಕ್ಷದಿಂದ ಡಾ.ಜಿ. ವೆಂಕಟೇಶ್, 1986ರಲ್ಲಿ ವೈ. ರಾಮಕೃಷ್ಣ ಗೆದ್ದಿದ್ದರೆ, 1991ರಿಂದ 2014ರವರೆಗೆ ಕೆ.ಎಚ್. ಮುನಿಯಪ್ಪ ಕ್ಷೇತ್ರವನ್ನು ತಮ್ಮ ಹಿಡಿತದಲ್ಲಿಟ್ಟಿಕೊಂಡಿದ್ದು ಮತ್ತೆ ಮತದಾರರ ಆಶೀರ್ವಾದಕ್ಕಾಗಿ ಪ್ರಯತ್ನ ನಡೆಸಿದ್ದಾರೆ.
ಒಟ್ಟು ಹದಿನೈದು ಚುನಾವಣೆಗಳಲ್ಲಿ ಕಾಂಗ್ರೆಸ್ 14 ಬಾರಿ ಕ್ಷೇತ್ರವನ್ನು ಆಳಿದ್ದರೆ ಜನತಾಪಕ್ಷ ಕೇವಲ ಒಂದು ಸಾರಿ ಮಾತ್ರ ಕ್ಷೇತ್ರವನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತ್ತು.
ಟಿಕೆಟ್ ವಂಚಿತರು: ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಬೇರೆ ಯಾವುದೇ ಪಕ್ಷಗಳು 15 ಚುನಾವಣೆಗಳಲ್ಲಿ ಒಮ್ಮೆಯೂ ಮಹಿಳೆಯರಿಗೆ ಅವಕಾಶ ಕಲ್ಪಿಸಿಲ್ಲ. ಕಳೆದ ಎರಡು ಚುನಾವಣೆಗಳಿಂದ ಜೆಡಿಎಸ್ ಜಿಪಂ ಸದಸ್ಯ, ದಿವಂಗತ ಐಎಎಸ್ ಅಧಿಕಾರಿ ಮುನಿಸ್ವಾಮಿಯವರ ಪತ್ನಿ ಮಂಗಮ್ಮ, ಬಿಜೆಪಿ ಮುಖಂಡರಾದ ತೇಜಸ್ವಿನಿ ಅವರು ಲೋಕಸಭೆಗೆ ಸ್ಪರ್ಧಿಸಲು ಬಯಸಿದ್ದರಾದರೂ ಟಿಕೆಟ್ ಪಡೆಯಲಾಗಲಿಲ್ಲ.
ಕಾಂಗ್ರೆಸ್ ಅಭ್ಯರ್ಥಿಯಾಗಿ ಕೋಲಾರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು 1984ರಲ್ಲಿ ಚಿಕ್ಕಬಳ್ಳಾಪುರ ಮಾಜಿ ಶಾಸಕಿ ರೇಣುಕಾ ರಾಜೇಂದ್ರನ್ ಅವರನ್ನು ಕಣಕ್ಕೆ ಇಳಿಸಲು ಕಾಂಗ್ರೆಸಿನ ಕೆಲ ಮುಖಂಡರು ಲಾಬಿ ಮಾಡಿದ್ದರಾದರೂ ಪಕ್ಷದ ವರಿಷ್ಠರು ಅವಕಾಶ ನೀಡಿರಲಿಲ್ಲ.
ಮೂರು ಪ್ರಮುಖ ಪಕ್ಷಗಳಲ್ಲಿ ಪ್ರಬಲ ಪೈಪೋಟಿ ನೀಡುವ ಮಹಿಳಾ ಅಭ್ಯರ್ಥಿಯನ್ನು ಹುಡುಕಲು ಸಾಧ್ಯವಾಗದಿರುವುದು ಹಾಗೂ ಒಂದು ವೇಳೆ ಅವಕಾಶ ನೀಡಿದರೂ ಮೀಸಲು ಕ್ಷೇತ್ರವಾಗಿರುವುದರಿಂದ ಗೆಲುವುದು ಕಷ್ಟವೆಂಬ ರಾಜಕೀಯ ಲೆಕ್ಕಚಾರದಿಂದಾಗಿ ಪುರುಷರ ಕಾರುಬಾರು ಮುಂದುವರೆದಿದೆ.
ವೈ. ರಾಮಕ್ಕ ಅದೃಷ್ಟಶಾಲಿ: ಲೋಕಸಭಾ ಚುನಾವಣೆಗೆ ಸ್ಪರ್ಧಿಸಲೂ ಮಹಿಳೆಯರಿಗೆ ಪ್ರಾತಿನಿಧ್ಯತೆ ನೀಡಿದ್ದರೂ ವಿಧಾನಸಭಾ ಚುನಾವಣೆಯಲ್ಲಿ ಮಾತ್ರ ಜೆಡಿಎಸ್ ಮತ್ತು ಕಾಂಗ್ರೆಸ್ ಹೊರತುಪಡಿಸಿ ಬಿಜೆಪಿ ಮಹಿಳೆಗೆ ಅವಕಾಶ ನೀಡಿರುವುದು ಗಮನರ್ಹ. ಕೋಲಾರ ಜಿಲ್ಲೆಯ ಆರು ವಿಧಾನ ಕ್ಷೇತ್ರಗಳ ಪೈಕಿ ಕೆಜಿಎಫ್ ಕ್ಷೇತ್ರದಿಂದ ವೈ. ರಾಮಕ್ಕನವರಿಗೆ ಬಿಜೆಪಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟು ಗೆಲ್ಲಿಸಿಕೊಂಡಿದೆ.
1983ರಲ್ಲಿ ನಡೆದ ವಿಧಾನಸಭಾ ಚುನಾವಣೆಗೆ ಆಗಿನ ಬೇತಮಂಗಲ ಕ್ಷೇತ್ರದಿಂದ ಕರ್ನಾಟಕ ಕ್ರಾಂತಿ ರಂಗದ ಅಭ್ಯರ್ಥಿಯಾಗಿ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಆಗಿದ್ದ ನಾರಾಯಣಮ್ಮರನ್ನು ಕಣಕ್ಕೆ ಇಳಿಸಲಾಗಿತ್ತು. ಆದರೆ, ನಾರಾಯಣಮ್ಮ ಬಳಿ ಹಣವಿಲ್ಲವೆಂದು ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದ್ದ ಜನತಾಪಕ್ಷದ ಕೆಲ ಮುಖಂಡರು ಅರಣ್ಯ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ನಾರಾಯಣರಾಜು ಅವರ ಪತ್ನಿ ಲಕ್ಷ್ಮಮ್ಮರವರನ್ನು ಕಣಕ್ಕೆ ಇಳಿಸಿದ್ದರಿಂದ ಇಬ್ಬರ ಜಗಳದಲ್ಲಿ ಕಾಂಗ್ರೆಸಿನ ಸಿ. ವೆಂಕಟೇಶಪ್ಪ ಜಯಗಳಿಸುವಂತಾಯಿತು.