ಗಡಿ ಭಾಗದಲ್ಲಿ ಕನ್ನಡ ಸೇವೆಗೆ ಶ್ಲಾಘನೆ
ಬಂಗಾರಪೇಟೆ: ಗಡಿ ಭಾಗದಲ್ಲಿ ಕನ್ನಡತನ ಉಳಿಸಿ ಬೆಳೆಸಿಕೊಂಡು ಬರುತ್ತಿರುವ ಕನ್ನಡ ಸಂಘದ ಕಾರ್ಯವೈಖರಿ ಶ್ಲಾಘನೀಯ ಎಂದು ವೃತ್ತ ನಿರೀಕ್ಷಕ ವೆಂಕಟಾಚಲಪತಿ ಹೇಳಿದರು.
ಪಟ್ಟಣದ ಕುವೆಂಪು ವೃತ್ತದಲ್ಲಿ ಕನ್ನಡ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಭುವನೇಶ್ವರಿ ತಾಯಿ ಪೂಜೆ, ಶ್ರೀ ಶಿವಕುಮಾರಸ್ವಾಮಿಗಳ 107 ನೇ ಹುಟ್ಟು ಹಬ್ಬ ಮತ್ತು ಸಾಂಸ್ಕೃತಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಚಿನ್ನದ ಪದಕ ಪಡೆದ ಮೂವರನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಮಾತನಾಡಿ, ಪ್ರತಿ ತಿಂಗಳು ಸಮಾಜದ ವಿವಿಧ ರಂಗಗಳಲ್ಲಿ ಸೇವೆ ಹಾಗೂ ಸಾಧನೆ ಮಾಡಿರುವವರನ್ನು ಗುರುತಿಸಿ ಅವರಿಗೆ ಪ್ರೋತ್ಸಹ ನೀಡುವ ಮೂಲಕ ಕನ್ನಡ ಸಂಘ ಕೀರ್ತಿಗೆ ಪಾತ್ರವಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿ.ಎ. ಪರೀಕ್ಷೆಯಲ್ಲಿ ಮೊದಲ ರಾಂಕ್ ಪಡೆದ ಜಿ.ಎಂ. ತಿಮ್ಮರಾಯಪ್ಪ, ಎಂಕಾಂ, ಪಿ.ಜಿ.ಯಲ್ಲಿ ಮೊದಲ ರ್ಯಾಂಕ್ ಪಡೆದ ಬಂಗಾರಪೇಟೆಯ ಸುಪೃತಿ.ಆರ್., ಶಿಕ್ಷಕರು ಹಾಗೂ ಅಂತಾರಾಷ್ಟ್ರೀಯ ಈಜುಪಟು ಎಂ. ಮಂಜುನಾಥ್ರನ್ನು ಕನ್ನಡ ಸಂಘದ ವತಿಯಿಂದ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಟೇಕಲ್ ತಿಮ್ಮರಾಯಪ್ಪರ ಹೆಚ್ಚಿನ ವಿಧ್ಯಾಬ್ಯಾಸಕ್ಕಾಗಿ ಕನ್ನಡ ಸಂಘದ ಅಧ್ಯಕ್ಷ ಪಲ್ಲವಿ ಮಣಿ ಹತ್ತು ಸಾವಿರ ಮತ್ತು ಮುಬಾರಕ್ ಹೊಟೇಲ್ ಮಾಲೀಕ ಅಪ್ಸರ್ ಪಾಷಾರವರು ಹತ್ತು ಸಾವಿರ ನಗದು ಹಣ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಂಘದ ಅಧ್ಯಕ್ಷ ಪಲ್ಲವಿಮಣಿ, ಶ್ರೀ ಶಿವಕುಮಾರಸ್ವಾಮಿಗಳ ಸೇವೆ ಮತ್ತು ಅವರ ಗುಣಗಾನ ಮಾಡಿದರು. ವಕೀಲ ಕುಸುಮಾ ಕೃಷ್ಣಮೂರ್ತಿ, ರಾಜಶೇಖರ್, ರಂಗರಾಮಯ್ಯ, ಹೇಮಂತ್ ಕುಮಾರ್, ಜಗದೀಶ್ ಇದ್ದರು.