ಚಿನ್ನದ ಗಣಿ ಪುನರಾರಂಭಕ್ಕೆ ಮೋದಿ ಪ್ರಧಾನಿಯಾಗಬೇಕು
ಕೆಜಿಎಫ್: ನರೇಂದ್ರಮೋದಿ ದೇಶದ ಪ್ರಧಾನಿಯಾಗುವುದು ಖಚಿತ. ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತವಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಎಂ. ನಾರಾಯಣಸ್ವಾಮಿ ಹೇಳಿದರು.
ಕೆಜಿಎಫ್ ಕ್ಷೇತ್ರದ ಯರ್ರಗಾನಹಳ್ಳಿ ಗ್ರಾಮದಲ್ಲಿ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ನರೇಂದ್ರಮೋದಿ ಮತ್ತೊಮ್ಮೆ ಬಿಜಿಎಂಎಲ್ ಚಿನ್ನದ ಗಣಿಗಳನ್ನು ಪುನರಾರಂಭಿಸುವ ಸುವರ್ಣಗಳಿಗೆಯನ್ನು ದೇಶದ ಜನತೆ ನೋಡುವ ಸಂದರ್ಭ ಬಹಳ ದೂರವಿಲ್ಲ. ಕಳೆದ ಆರು ಭಾರಿ ಸಂಸದರಾಗಿ 2 ಭಾರಿ ಕೇಂದ್ರ ಸಚಿವರಾಗಿರುವ ಕೆ.ಎಚ್. ಮುನಿಯಪ್ಪ ಬಿಜಿಎಂಎಲ್ ಚಿನ್ನದ ಗಣಿಗಳನ್ನು 2001ರಲ್ಲಿ ಮುಚ್ಚಿದ ನಂತರ ಕಾರ್ಮಿಕರ ಸಂಕಷ್ಟದ ಜೀವನಕ್ಕೆ ಯಾವುದೇ ಪರ್ಯಾಯ ಯೋಜನೆಗಳನ್ನು ಮತ್ತು ಕಾರ್ಖಾನೆಗಳನ್ನು ಸ್ಥಾಪಿಸಿ ಕಾರ್ಮಿಕರ ಕುಟುಂಬ ವರ್ಗಕ್ಕೆ ಸೂಕ್ತ ಉದ್ಯೋಗವಕಾಶ ಕಲ್ಪಿಸದೇ ಬಿಜಿಎಂಎಲ್ ಕಾರ್ಮಿಕರು ಬೀದಿಪಾಲಗಲು ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಮೂಲ ಕಾರಣಕರ್ತರಾಗಿದ್ದಾರೆ ಎಂದು ಆರೋಪಿಸಿದರು.
ಚುನಾವಣೆ ಬಂದಾಗ ಮಾತ್ರ ಕೆ.ಎಚ್. ಮುನಿಯಪ್ಪ ಬಿಜಿಎಂಎಲ್ ಕಾರ್ಮಿಕರನ್ನು ನೆನಪು ಮಾಡಿಕೊಳ್ಳುತ್ತಾರೆ. 2001ರಲ್ಲಿ ಚಿನ್ನದ ಗಣಿಗಳನ್ನು ಮುಚ್ಚಿದ ನಂತರ ಕಲೆದ 10 ವರ್ಷಗಳ ಕಾಲ ಕೇಂದ್ರದಲ್ಲಿ ಯುಪಿಎ ಸರ್ಕಾರ ಹಾಗೂ ಸಚಿವರಾಗಿ ಕಾರ್ಯನಿರ್ವಹಿಸಿದ ಕೆ.ಎಚ್. ಮುನಿಯಪ್ಪ ಬಿಜಿಎಂಎಲ್ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಮುಂದಾಗದೆ ಇದೀಗ ಚುನಾವಣೆ ಸಮೀಪದಲ್ಲಿ ಗಣಿಗಳ ಆಸ್ತಿ ಮೌಲ್ಯಮಾಪನ ಟೆಂಡರ್ ಪ್ರಕ್ರಿಯೆಯನ್ನು ರಾಜಕೀಯ ಲಾಭ ಮಾಡಿಕೊಂಡು ಈ ಭಾಗದ ಜನತೆಯ ಮುಂದೆ ಚುನಾವಣೆ ಪ್ರಚಾರದಲ್ಲಿ ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು.
ಕ್ಷೇತ್ರದ ಶಾಸಕಿ ವೈ. ರಾಮಕ್ಕ ಮಾತನಾಡಿ, ಕೆಜಿಎಫ್ನಲ್ಲಿ ಗತವೈಭವ ಮರಲಿ ಬರಬೇಕಾದರೆ ಕೇಂದ್ರದಲ್ಲಿ ನರೇಂದ್ರಮೋದಿ ಪ್ರಧಾನಿಯಾಗಬೇಕು. ಕೆಜಿಎಫ್ನ ಬಿಜಿಎಂಎಲ್ ಕಾರ್ಮಿಕರ ಸಮಸ್ಯೆಗೆ ನರೇಂದ್ರಮೋದಿ ಗುಜರಾತ್ ಮಾದರಿಯಲ್ಲಿ ಪ್ಯಾಕೇಜ್ ಘೋಷಣೆ ಹಾಗೂ ಇತಿಹಾಸ ಪ್ರಸಿದ್ಧ ಕೆಜಿಎಫ್ ಕ್ಷೇತ್ರ ಹಾಗೂ ಕೋಲಾರ ಜಿಲ್ಲೆಯ ಅಭಿವೃದ್ಧಿಗೆ ಜನತೆ ನರೇಂದ್ರಮೋದಿಯನ್ನು ಬೆಂಬಲಿಸಿ ಬಿಜೆಪಿ ಅಭ್ಯರ್ಥಿಗೆ ಮತ ನೀಡಿಲು ಮುಂದಾಗಬೇಕು ಎಂದರು.
ಮಾಜಿ ಶಾಸಕ ವೈ.ಸಂಪಂಗಿ, ವಿಜಯಶಂಕರ್, ಅಮರನಾರಾಯಣರೆಡ್ಡಿ, ಜಿಲ್ಲಾ ಉಪಾಧ್ಯಕ್ಷ ಮುನಿಸ್ವಾಮಿರೆಡ್ಡಿ, ಅಮರೇಂದ್ರಮೌನಿ, ಪ್ರಸನ್ನರೆಡ್ಡಿ ಸೇರಿದಂತೆ ಇತರೆ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.