ತೋಟಕ್ಕೆ ಬೆಂಕಿ: ಸಪೋಟಾ ಭಸ್ಮ
ಟೇಕಲ್: ಮಾಸ್ತಿ ಗ್ರಾಮದ ಆರ್. ಗುಣಶೇಖರ್ ಎಂಬುವರಿಗೆ ಸೇರಿದ 150 ಸಪೋಟಾ ಗಿಡ ಹಾಗೂ ತೆಂಗಿನ ಮರಗಳಿಗೆ ದುಷ್ಕರ್ಮಿಗಳು ಬೆಂಕಿ ಇಟ್ಟ ಪರಿಣಾಮ ತೋಟವೆಲ್ಲ ಸಂಪೂರ್ಣ ಸುಟ್ಟು ಭಸ್ಮವಾಗಿದೆ.
ಸುಮಾರು 3 ಲಕ್ಷಕ್ಕೂ ಹೆಚ್ಚು ಬೆಳೆ ನಷ್ಟವಾಗಿದೆ ಎಂದು ಆರ್. ಗುಣಶೇಖರ್ ತಿಳಿಸಿದ್ದಾರೆ. ರೈತನಿಗೆ ಸರ್ಕಾರದಿಂದ ಬೆಳೆ ನಷ್ಟಕ್ಕಾಗಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಅಪಘಾತ: ಮೂರು ಮಂದಿಗೆ ಗಾಯ
ಚಿಂತಾಮಣಿ: ತಾಲೂಕಿನ ಸಂತೆಕಲ್ಲಹಳ್ಳಿ ಗೇಟ್ ಬಳಿ ಮಂಗಳವಾರ ರಾತ್ರಿ ಸಂಭವಿಸಿದ ಲಾರಿ ಹಾಗೂ ಕಾರ್ ನಡುವಿನ ಅಪಘಾತದಲ್ಲಿ ಮೂವರು ಗಾಯಗೊಂಡ ಘಟನೆ ನಡೆದಿದೆ. ತಾಲೂಕಿನ ಟಿ.ಹೊಸಹಳ್ಳಿ ಗ್ರಾಮಗ ಸೇರಿದ ಪ್ರಭಾಕರ್, ರಾಧಮ್ಮ, ಭಾಗ್ಯಮ್ಮ ಸೇರಿ ಐವರು ಬೆಂಗಳೂರು-ಚಿಂತಾಮಣಿ ಮಾರ್ಗವಾಗಿ ಸ್ವಗ್ರಾಮಕ್ಕೆ ಕಾರಿನಲ್ಲಿ ಬರುತ್ತಿದ್ದರು. ಆಗ ಎದುರಿನಿಂದ ಬಂದ ಲಾರಿ ಕಾರಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಪ್ರಭಾಕರ್, ರಾಧಮ್ಮ, ಭಾಗ್ಯಮ್ಮ ಗಂಭೀರ ಗಾಯಗಳಾಗಿ ಕೋಲಾರ ಮತ್ತು ಬೆಂಗಳೂರು ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್‌ರು ತಿಳಿಸಿದ್ದಾರೆ.
ಈಜಲು ಹೋದ ಯುವಕ ಸಾವು
ಮಾಲೂರು: ತನ್ನ ಸ್ನೇಹಿತರೊಡನೆ ಕೆರೆಯಲ್ಲಿ ಈಜಲು ಹೋದ ವ್ಯಕ್ತಿಯೂಬ್ಬ ನೀರಿನಲ್ಲಿ ಮುಳಗಿ ಮೃತಪಟ್ಟ ಘಟನೆ ತಾಲೂಕಿನ ಲಕ್ಕೂರು ಗ್ರಾಮದ ದೊಡ್ಡ ಕೆರೆಯಲ್ಲಿ ನಡೆದಿದೆ. ಮೃತನನ್ನು ಚೆನ್ನಗಾರಾಯಪುರದ ರಾಜೇಂದ್ರ ಬಾಬು(24)ಎಂದು ಗುರುತಿಸಲಾಗಿದೆ. ಹಬ್ಬದ ಪ್ರಯುಕ್ತ ಮನೆಗೆ ಬಂದಿದ್ದ ಕೇಂಗೆರಿಯ ನಿವಾಸಿ ಮೃತನ ಭಾವಮೈದ ಕಾರ್ತಿಕ್(16)ಜತೆಯಲ್ಲಿ ತನ್ನ ಗ್ರಾಮದ ಸ್ನೇಹಿತರೊಡನೆ ಲಕ್ಕೂರಿನ ದೊಡ್ಡ ಕೆರೆಯಲ್ಲಿ ಈಜಲು ಹೋದಾಗ ಈ ದುರ್ಘಟನೆ ಸಂಭವಿಸಿದೆ. ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.
ಕೈವಾರದಲ್ಲಿ ಯುಗಾದಿ ಸಂಭ್ರಮ
ಚಿಂತಾಮಣಿ ತಾಲೂಕಿನ ಕೈವಾರದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಸದ್ಗುರು ತಾತಯ್ಯನವರ ಬೃಂದಾವನವನ್ನು ವಿಶೇಷ ಹೂಗಳಿಂದ ಅಲಂಕರಿಸಲಾಗಿತ್ತು. ಬೆಳಗಿನಿಂದಲೇ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಿದ್ದರು. ಅಮರನಾರೇಯಣಸ್ವಾಮಿ ದೇವಾಲಯ, ಭೀಮಲಿಂಗೇಶ್ವರ ಸ್ವಾಮಿ ದೇವಾಲಯಗಳಲ್ಲಿ ಯುಗಾದಿ ವಿಶೇಷ ಅಭಿಷೇಕ ಮತ್ತು ಪ್ರಾಕಾರೋತ್ಸವಗಳನ್ನು ಏರ್ಪಡಿಸಲಾಗಿತ್ತು.