ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬೀದಿ ನಾಟಕ ಮೂಲಕ ಮತ ಯಂತ್ರ ಬಳಕೆ ಜಾಗೃತಿ

Rashmi Kasaragodu
Updated On : 3 Apr 2014, 1:09 am

ಕೋಲಾರ: ಪ್ರತಿಯೊಬ್ಬರು ಸುಲಭವಾಗಿ ಮತದಾನ ಮಾಡಬೇಕೆಂಬ ಉದ್ದೇಶದಿಂದ ಲೋಕಸಭಾ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಮತ ಯಂತ್ರಗಳ ವ್ಯವಸ್ಥೆ ಮಾಡಿರುವುದರಿಂದ ಮತದಾರರು ಮತ ಯಂತ್ರಗಳ ಬಗ್ಗೆ ಅರಿವು ಪಡೆಯಬೇಕೆಂದು ಜಿಪಂ ಸಿಇಒ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರಾದ ವಿನೋತ್ ಪ್ರಿಯಾ ತಿಳಿಸಿದರು.
ನಗರದ ಬಸ್‌ನಿಲ್ದಾಣದಲ್ಲಿ ಬುಧವಾರ ಅವರು ಸ್ವೀಪ್ ಸಮಿತಿ ಹಾಗೂ ವಾರ್ತಾ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಎಲೆಕ್ಟ್ರಾನಿಕ್ ಮತ ಯಂತ್ರಗಳ ಬಳಕೆ ಪ್ರಾತ್ಯಕ್ಷಿಕೆ ಹಾಗೂ ಮತದಾನದ ಜಾಗೃತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಮತದಾರರ ಪಟ್ಟಿಯಲ್ಲಿ ಹೆಸರಿರುವ ಪ್ರತಿಯೊಬ್ಬರೂ ಮತ ಹಾಕಿ ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡುವುದರಿಂದ ದೇಶದ ಸಮಗ್ರತೆ ರಕ್ಷಣೆಯ ಜತೆಗೆ ಆರ್ಥಿಕ, ಸಾಮಾಜಿಕ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಮತದಾನದ ಪ್ರಮಾಣ ಹೆಚ್ಚಿಸಲು ಮತ್ತು ಪ್ರತಿಯೊಬ್ಬ ಪ್ರಜೆಯೂ ಮತದಾನದಲ್ಲಿ ಪಾಲ್ಗೊಳ್ಳುವಂತೆ ಮಾಡಲು ಜಾಗೃತಿ ಮೂಡಿಸುವ ಕಾರ್ಯ ಸಾಗಿದ್ದು, ಗ್ರಾಮೀಣ ಪ್ರದೇಶಗಳು, ಜನನಿಬಿಡ ಪ್ರದೇಶಗಳಲ್ಲಿ ಜಾನಪದ ಕಲಾ ತಂಡಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದರು.
ಜಿಪಂ ಉಪ ಕಾರ್ಯದರ್ಶಿ ಬದನೂರ್ ಮಾತನಾಡಿ ಜಿಲ್ಲೆಯ 156 ಗ್ರಾಮ ಪಂಚಾಯಿತಿ ಕೇಂದ್ರಗಳಲ್ಲೂ ಸ್ವೀಪ್ ಸಮಿತಿಯಿಂದ ಮತದಾನದ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು.
ಮತ ಹಾಕುವಾಗ ತೋರಿಸಬೇಕಾದ ಗುರುತಿನ ಚೀಟಿಯ ಕುರಿತು ಮಾಹಿತಿ ನೀಡಿದ ಅವರು, ಮುಕ್ತ, ನ್ಯಾಯಸಮ್ಮತ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಎಲ್ಲೇ ಆಗಲಿ ಭಯ ಉಂಟು ಮಾಡುವ ವಾತಾವರಣ ಕಂಡು ಬಂದಲ್ಲಿ ಚುನಾವಣಾ ಆಯೋಗ ನೀಡಿರುವ ಟೋಲ್‌ಫ್ರೀ ಸಂಖ್ಯೆಗೆ ದೂರವಾಣಿ ಮಾಡಿ ನಿರ್ಭೀತಿಯಿಂದ ಮತ ಚಲಾಯಿಸಬಹುದಾಗಿದೆ ಎಂದರು.
ಸಾರಿಗೆ ಸಂಸ್ಥೆ ವಿಭಾಗಾಧಿಕಾರಿ ಬಿ.ಎಸ್. ಲಿಂಗರಾಜ್, ಜಿಲ್ಲಾ ವಾರ್ತಾಧಿಕಾರಿಗಳು ಹಾಗೂ ಸ್ವೀಪ್ ಸಮಿತಿ ಕಾರ್ಯದರ್ಶಿ  ಸಿ.ಎಂ. ರಂಗಾರೆಡ್ಡಿ ಮತದಾನದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಕಲಾವಿದರಾದ ವೆಂಕಟಾಚಲಪತಿ, ಮುನಿಸ್ವಾಮಿ ನೇತೃತ್ವದ ಕಲಾ ತಂಡದಿಂದ ಮತದಾನದ ಬಗ್ಗೆ  ಜಾಗೃತಿ ಮೂಡಿಸುವ ಬೀದಿ ನಾಟಕ, ಜಾನಪದ ಹಾಡುಗಳ ಕಾರ್ಯಕ್ರಮ ಗಮನ ಸೆಳೆಯಿತು.
ಜಿಪಂ ಇಇ ದೇವರಾಜ್, ತಾಪಂ ಇಓ ಜಾನಕೀರಾಮ್, ಪ್ಲೈಯಿಂಗ್ ದಳದ ಅಧಿಕಾರಿ ಫಣೀಂದ್ರ, ಸಾರಿಗೆ ಸಂಸ್ಥೆ ಕಾನೂನು ಅಧಿಕಾರಿ ವೆಂಕಟರಮಣಪ್ಪ, ಬಸ್‌ನಿಲ್ದಾಣದ ಮೇಲ್ವಿಚಾರಕ ಶಿವಕುಮಾರ್, ಪಿಡಿಒ ಮುನಿರಾಜು, ಜಿಪಂ ಅಧೀಕ್ಷಕಿ ಸುನಂದಮ್ಮ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement