ಮರಳು ಕುಸಿದು ಇಬ್ಬರಿಗೆ ಗಾಯ
ಬಂಗಾರಪೇಟೆ: ಅಕ್ರಮ ಮರಳು ಸಾಗಾಣೆ ಮಾಡುವ ವೇಳೆ ಮರಳು ಗುಡ್ಡ ಕುಸಿದು ಬಿದ್ದು ಇಬ್ಬರಿಗೆ ಗಾಯಗಳಾಗಿರುವ ಘಟನೆ ತಾಲೂಕಿನ ದೋಣಿಮಗಡು ಗ್ರಾಮದಲ್ಲಿ ನಡೆದಿದೆ.
ಪೊಲೇನಹಳ್ಳಿ ಗ್ರಾಮದ ಈರಪ್ಪ ಮತ್ತು ಬೂವನಹಳ್ಳಿ ಗ್ರಾಮದ ಸೀತಾರಾಮಪ್ಪ ಎಂಬುವರಿಗೆ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ದೋಣಿಮಗಡು ಗ್ರಾಮದ ಕೆರೆಯಲ್ಲಿ ಕಳೆದ ಮೂರು ವರ್ಷಗಳಿಂದ ಅಕ್ರಮವಾಗಿ ಮರಳನ್ನು ಲೂಟಿ ಮಾಡಲಾಗುತ್ತಿತ್ತು. ಆದರೂ ಪಂಚಾಯ್ತಿ ಅಥವಾ ತಾಲೂಕು ಆಡಳಿತವಾಗಲಿ ಗಮನಹರಿಸಿಲ್ಲ. ಇದರ ಪರಿಣಾಮ ಕೆರೆಯಲ್ಲಿ ಮರಳು ಮಾಯವಾಗಿದೆ. ನೀರು ಬಂದರೂ ಶೇಖರಣೆಯಾಗುತ್ತಿಲ್ಲ. ಮರಳು ದಂಧೆ ತಡೆಗಟ್ಟಬೇಕೆಂದು ಸರ್ಕಾರ ಹೇಳುತ್ತಿದೆಯಾದರೂ ಮುಂದಾಗಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಬುಧವಾರ ಸಹ ಇಬ್ಬರು ವ್ಯಕ್ತಿಗಳು ಕೆರೆಯಲ್ಲಿ ಮರಳು ತೆಗೆಯುತ್ತಿದ್ದಾಗ ಮರಳು ಗುಡ್ಡದ ಕುಸಿದು ಈ ಘಟನೆ ಸಂಭವಿಸಿದೆ.