ಸುಡು ಬಿಸಿಲಿನಲ್ಲೂ ಅಬ್ಬರದ ಪ್ರಚಾರ ನಡೆಸುವ ನಾಯಕರು
ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆಗೆ ಬಿರುಸಿನ ಪ್ರಚಾರ ಕೈಗೊಂಡಿರುವ ನಾನಾ ಪಕ್ಷಗಳ ಅಭ್ಯರ್ಥಿಗಳು ಕ್ಷೇತ್ರದ ವಿವಿಧೆಡೆ ರ್ಯಾಲಿ, ಪಾದಯಾತ್ರೆಗಳ ಮೂಲಕ ತಮ್ಮದೇ ಆದ ಶೈಲಿಯಲ್ಲಿ ಮತ ಯಾಚಿಸುತ್ತಿದ್ದು ಟೀಕೆ ಪ್ರತಿ ಟೀಕೆಗಳೂ ಜೋರಾಗುತ್ತಿವೆ.
ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಶಕ್ತಿ ಪ್ರದರ್ಶಶ ತೋರಿದ ಅಭ್ಯರ್ಥಿಗಳು ಯುಗಾದಿ ಹಬ್ಬ ಮುಗಿಯುತ್ತಿದ್ದಂತೆ ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಎಂ. ವೀರಪ್ಪ ಮೊಯ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬುಧವಾರ ಬಿರುಸಿನ ಪ್ರಚಾರ ಕೈಗೊಂಡರು. ಬೇರೆ ಕಡೆಯಿಂದ ಬಂದರೂ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿರುವ ತಮ್ಮ ಕೆಲಸ ನೋಡಿ 2009 ರ ಲೋಕಸಭಾ ಚುನಾವಣೆಯಲ್ಲಿ ಜನರು ಸುಮಾರು 50 ಸಾವಿರ ಮತಗಳ ಅಂತರದಲ್ಲಿ ನನಗೆ ಅಭೂತಪೂರ್ವ ಗೆಲುವನ್ನು ತಂದು ಕೊಟ್ಟಿದ್ದು ಈ ಮೂಲಕ ಇಲ್ಲಿ ನಾನು ರಾಜಕೀಯ ಪುನರ್ ಜನ್ಮವನ್ನು ಪಡೆದೆ ಎಂದರು. ಪ್ರಚಾರದಲ್ಲಿ ಶಾಸಕ ಕೆ. ಸುಧಾಕರ್, ಜಿಪಂ ಮಾಜಿ ಸದಸ್ಯ ಪಿ.ಎನ್. ಕೇಶವರೆಡ್ಡಿ ಇದ್ದರು.
ಬಿಜೆಪಿ ಅಭ್ಯರ್ಥಿ ಬಿ.ಎನ್. ಬಚ್ಚೇಗೌಡ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಿದರು. ಪ್ರಮುಖ ರಸ್ತೆಗಳಲ್ಲಿ ರ್ಯಾಲಿ ನಡೆಸಿ ಮತ ಯಾಚಿಸಿದರು. ದೇಶದ ಉಜ್ವಲ ಭವಿಷ್ಯಕ್ಕಾಗಿ ನರೇಂದ್ರ ಮೋದಿಯನ್ನು ಪ್ರಧಾನಿಯನ್ನಾಗಿಸಬೇಕೆಂಬ ಮನೋಭಾವನೆ ಜನರು ತೋರುತ್ತಿದ್ದು, ಎಲ್ಲೆಡೆ ಮೋದಿ ಬಿರುಗಾಳಿ ಅಲೆ ಇದೆ ಎಂದ ಅವರು, ವೀರಪ್ಪ ಮೊಯ್ಲಿ ಕ್ಷೇತ್ರದ ಜನರಿಗೆ ನೀಡಿರುವ ಭರವಸೆ ಈಡೇರಿಸದೇ ಮೋಸ ಮಾಡಿದ್ದಾರೆ. ಇದಕ್ಕೆ ಸ್ವಯಂ ಜನರೇ ಬೇಸರ ವ್ಯಕ್ತಪಡಿಸುತ್ತಿದ್ದು ಇದರಿಂದ ಅವರಿಗೆ ಸೋಲು, ತಮಗೆ ಗೆಲುವು ಖಚಿತ ಎಂದರು.
ಮತ್ತೊಂದೆಡೆ ಜೆಡಿಎಸ್ ಮುಖಂಡರು ಕುಮಾರಸ್ವಾಮಿ ಪರ ನಂದಿಯ ಶ್ರೀ ಭೋಗನಂದೀಶ್ವರ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಚಾರ ಕೈಗೊಂಡರು.ಚಿಕ್ಕಬಳ್ಳಾಪುರ ಜಿಲ್ಲೆಯನ್ನು ರಚನೆ ಮಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಗೆಲ್ಲಿಸಬೇಕು. ಸುಳ್ಳು ಭರವಸೆ ನೀಡಿದ ವೀರಪ್ಪ ಮೊಯ್ಲಿ ಮತ್ತು ಮೋದಿ ಅಲೆಯಲ್ಲಿ ತೇಲಾಡುತ್ತಿರುವ ಬಚ್ಚೇಗೌಡರಿಗೆ ತಕ್ಕ ಪಾಠ ಕಲಿಸಬೇಕೆಂದು ಮನವಿ ಮಾಡಿದರು.
ಎಎಪಿ, ಜೆಡಿಯು, ಬಿಎಸ್‌ಪಿ ಸೇರಿದಂತೆ ಇತರೆ ಪಕ್ಷಗಳು ಪ್ರಚಾರದಲ್ಲಿ ಹಿಂದೆ ಬಿದ್ದಿಲ್ಲ. ಆದರೆ ಮತದಾರ ಇನ್ನೂ ಗುಟ್ಟು ಬಿಟ್ಟಿಕೊಡುತ್ತಿಲ್ಲ.