ಖಾಸಗಿ ವೃತ್ತಿ ಶಿಕ್ಷಣ ಪರ ಆದೇಶಕ್ಕೆ ಖಂಡನೆ
ಕೋಲಾರ: ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗಧಿಗೆ ಸಂಬಂಧಿಸಿದ ಕಾಯ್ದೆ-2006ನ್ನು ತಿರಸ್ಕರಿಸುವಂತೆ ಎಸ್ಎಫ್ಐ ಒತ್ತಾಯಿಸಿದೆ.
ಈ ಸಂಬಂಧ ಸಂಘಟನೆಯ ಮುಖಂಡರ ನಿಯೋಗ ಜಿಲ್ಲಾಧಿಕಾರಿ ಡಿ.ಕೆ. ರವಿ ಅವರನ್ನು ಗುರುವಾರ ಭೇಟಿಯಾಗಿ ಮನವಿ ಸಲ್ಲಿಸಿತು. 2006ರ ಸಿ.ಇ.ಟಿ ಕಾಯ್ದೆಯು ವಿದ್ಯಾರ್ಥಿ ವಿರೋಧಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಪರವಾದ ಏಕಮುಖ ಕಾಯ್ದೆಯಾಗಿರುವುದರಿಂದ ಸರ್ಕಾರ ಇದಕ್ಕೆ ಮಾನ್ಯತೆ ನೀಡಬಾರದೆಂದು ಮುಖಂಡರು ಆಗ್ರಹಿಸಿದರು. ಈ ಕಾಯ್ದೆ ಹಲವು ಅಪಾಯಕಾರಿ ಅಂಶಗಳಿಂದ ಕೂಡಿದೆ. ಈ ವೃತ್ತಿ ಶಿಕ್ಷಣ ಕೋರ್ಸ್ಗಳ ಶುಲ್ಕ ನಿಗದಿಗೆ ನೇಮಕಗೊಂಡಿರುವ ಅಜಿತ್ ಗುಂಜಾಳ್ ನೇತೃತ್ವದ ಸಮಿತಿ ಖಾಸಗಿ ಕಾಲೇಜುಗಳ ಪರವಾದ ನೀತಿ ಅನುಸರಿಸಿ ಶುಲ್ಕ ಹೆಚ್ಚಳದ ಪ್ರಸ್ತಾವನೆ ಜೊತೆಗೆ ಪ್ರತಿ ಶಿಕ್ಷಣ ಸಂಸ್ಥೆಯಲ್ಲೂ ಇರುವ ಮೂಲ ಸೌಲಭ್ಯಗಳು, ಸಂಸ್ಥೆಯ ಆಡಳಿತ ಮತ್ತು ನಿರ್ವಣೆಗೆ ಬೇಕಿರುವ ಹಣವನ್ನು ಶುಲ್ಕದ ಮೂಲಕ ವಸೂಲಿ ಮಾಡಿಕೊಳ್ಳುವುದು, ಖಾಸಗಿ ಶಿಕ್ಷಣ ಸಂಸ್ಥೆಗಳಿರುವ ಪ್ರದೇಶ, ಸೌಕರ್ಯಗಳಗೆ ಅನುಗುಣವಾಗಿ ಶುಲ್ಕ ನಿಗಧಿ ಮಾಡಿಕೊಳ್ಳವ ಅಧಿಕಾರ ನೀಡುವುದು ಮತ್ತು ಪ್ರತಿ 3 ವರ್ಷಗಳಿಗೊಮ್ಮೆ ಶುಲ್ಕ ಹೆಚ್ಚಳಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸುವ ಶಿಫಾರಸುಗಳನ್ನು ಒಳಗೊಂಡ ಅಂಶಗಳಿದ್ದು ಇದಕ್ಕೆ ಹೈಕೋರ್ಟ್ ಒಪ್ಪಿಗೆ ನೀಡಿರುವುದು ಸರಿಯಲ್ಲವೆಂದು ವಾದಿಸಿದರು. ಖಾಸಗಿ ವೃತ್ತಿ ಶಿಕ್ಷಣ ಸಂಸ್ಥೆಗಳ ಪರ ಹೈಕೋರ್ಟ್ ನೀಡಿರುವ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಬೇಕು, ಅಗತ್ಯಬಿದ್ದರೆ ಸುಗ್ರೀವಾಜ್ಞೆ ಜಾರಿಗೊಳಿಸಿ ಬಡ ವಿದ್ಯಾರ್ಥಿಗಳ ಹಿತ ಕಾಪಾಡಬೇಕೆಂದು ಒತ್ತಾಯಿಸಿದರು. ಜಿಲ್ಲಾಧಿಕಾರಿ ಬಳಿ ತೆರೆಳಿದ್ದ ನಿಯೋಗದಲ್ಲಿ ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ಎನ್. ಮಾರ್ಕಂಡಯ್ಯ, ರಾಜ್ಯ ಸಮಿತಿ ಸದಸ್ಯ, ಸಿ. ಅಮರೇಶ್, ತಾಲೂಕು ಅಧ್ಯಕ್ಷ ಮಹ್ಮದ್ ಮುಸ್ತಾಫ್, ಚಂದ್ರಪ್ಪ ಇದ್ದರು.