ಗುಡಿಸಲು ಮುಕ್ತ ಕ್ಷೇತ್ರದ ಗುರಿ: ಮೊಯ್ಲಿ
ಬಾಗೇಪಲ್ಲಿ: ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಜನ ಇನ್ನೊಂದು ಬಾರಿ ಅವಕಾಶ ನೀಡಿದರೆ, 3 ವರ್ಷಗಳಲ್ಲಿ ಗುಡಿಸಲು ಮುಕ್ತ ಕ್ಷೇತ್ರವನ್ನಾಗಿಸುವುದಾಗಿ ಕೇಂದ್ರ ಸಚಿವ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ವೀರಪ್ಪ ಮೊಯ್ಲಿ ಭರವಸೆ ನೀಡಿದರು.
ತಾಲೂಕಿನ ಗೂಳೂರು ಹೋಬಳಿ ಕೇಂದ್ರದಲ್ಲಿ ಗುರುವಾರ ಮತಯಾಚಿಸಿ ಮಾತನಾಡಿದ ಅವರು, 'ಕ್ಷೇತ್ರದಲ್ಲಿ ವಸತಿಹೀನರಿಗೆ ಹಾಗೂ ಗುಡಿಸಲಿನಲ್ಲಿ ವಾಸವಾಗಿರುವವರಿಗೆ ಮನೆಗಳನ್ನು ನಿರ್ಮಿಸಿಕೊಡುವ ಮೂಲಕ ಈ ಕ್ಷೇತ್ರವನ್ನು ಗುಡಿಸಲು ಮುಕ್ತ ಕ್ಷೇತ್ರವನ್ನಾಗಿಸಲಾಗುವುದು.
ಜೊತೆಗೆ ಶುದ್ಧ ಕುಡಿಯುವ ನೀರು, ರಸ್ತೆ, ಚರಂಡಿ ಮತ್ತು ಬೀದಿ ದೀಪ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಇಡೀ ಚಿಕ್ಕಬಳ್ಳಾಪುರ ಕ್ಷೇತ್ರವನ್ನೇ ಮಾದರಿ ಕ್ಷೇತ್ರವನ್ನಾಗಿ ಮಾಡಲಾಗುವುದು' ಎಂದರು.
ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಅಧಿಕಾರದಲ್ಲಿದ್ದಾಗ ಯಾವುದೇ ರೀತಿಯ ಶಾಶ್ವತವಾದ ಯೋಜನೆಗಳನ್ನು ಜಾರಿಗೊಳಿಸಲಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಒಂದು ಗಂಟೆಯಲ್ಲೇ ರಾಜ್ಯದ ಬಡವರು ಹಸಿವಿನಿಂದ ಇರಬಾರದೆಂದು ಒಂದು ಕೆಜಿ ಅಕ್ಕಿ ಒಂದು ರುಪಾಯಿಯಂತೆ 30 ಕೆಜಿ ಅಕ್ಕಿ ನೀಡುವ ಯೋಜನೆಯನ್ನು ಘೋಷಿಸಿ, ಅನುಷ್ಠಾಕ್ಕೆ ತಂದರು. ಇದಲ್ಲದೆ, ಕ್ಷೀರಭಾಗ್ಯ, ಸಾಲಮನ್ನಾ, ಉದ್ಯೋಗ ಭಾಗ್ಯ, ಎತ್ತಿನಹೊಳೆ ಯೋಜನೆಯನ್ನು ಜಾರಿ ಸೇರಿದಂತೆ ಅನೇಕ ಜನಪರ ಹಾಗೂ ರೈತಪರವಾಗಿರುವಂತಹ ಹಾಗೂ ಶಾಶ್ವತವಾದಂಥ ಯೋಜನೆಗಳನ್ನು ಕಾಂಗ್ರೆಸ್ ಮಾಡಿದೆ ಎಂದರು. ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನಾ ಗೂಳೂರಿನ ವಿದ್ಯಾರ್ಥಿನಿಲಯದಿಂದ ಬಸ್ ನಿಲ್ದಾಣದವರಿಗೂ ಮುಖ್ಯರಸ್ತೆಯಲ್ಲಿ ಕಾಲ್ನಾಡಿಗೆಯಲ್ಲಿ ಆಗಮಿಸಿ, ರಸ್ತೆಯುದ್ದಕ್ಕೂ ನೆರೆದಿದ್ದ ಮತದಾರರಿಂದ ಮತಯಾಚಿಸಿದರು.
ಈ ಸಂದರ್ಭದಲ್ಲಿ ಆಂಜಿನಪ್ಪ, ಎಂ.ಬಿ.ಚಿಕ್ಕನರಸಿಂಹಯ್ಯ, ಚೆಂಡೂರು ವೆಂಕಟೇಶ್, ಗೂಳೂರು ಎಸ್.ಎಸ್.ರಮೇಶ್ ಬಾಬು, ಜಯಪ್ರಕಾಶ್ ನಾರಾಯಣ ಸೇರಿದಂತೆ ಅನೇಕ ಮುಖಂಡರಿದ್ದರು.