ಜೆಡಿಎಸ್ ಖಾತೆ ತೆರೆಯಲ್ಲ: ವರ್ತೂರ್
ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿಗೆ ಠೇವಣಿಯೂ ಸಿಗಲ್ಲ
ಕೋಲಾರ: ಜೆಡಿಎಸ್ ಕನಿಷ್ಠ ಮೂರು ಸ್ಥಾನ ಗೆಲ್ಲಬಹುದೆಂದು ನಿರೀಕ್ಷೆ ಮಾಡಿದ್ದೆ. ರಾಜ್ಯದ ಪ್ರಸಕ್ತ ರಾಜಕೀಯ ವಿದ್ಯಮಾನ ಗಮನಿಸಿದರೆ ಆ ಪಕ್ಷ ಖಾತೆ ತೆರೆಯುವುದು ಅನುಮಾನವಾಗಿದೆ ಎಂದು ಶಾಸಕ ವರ್ತೂರ್ ಪ್ರಕಾಶ್ ಅಭಿಪ್ರಾಯಪಟ್ಟರು.
ಕೋಲಾರ ಕ್ಷೇತ್ರಕ್ಕೆ ಒಳ್ಳೆಯ ಅಭ್ಯರ್ಥಿಗಳು ಸಿಗದೆ ಆಂಧ್ರಪ್ರದೇಶದ ಪುಂಗನೂರಿನಿಂದ ಕೇಶವ ಎಂಬ ದುಡ್ಡಿರುವ ವ್ಯಕ್ತಿಯನ್ನು ಕರೆತಂದು ಚುನಾವಣೆಗೆ ನಿಲ್ಲಿಸಿದ್ದಾರೆ. ಈ ವ್ಯಕ್ತಿ ಹಾಸನ ಮತ್ತು ಚಿಕ್ಕಬಳ್ಳಾಪುರ ಸೇರಿದಂತೆ ಕೆಲವು ಕ್ಷೇತ್ರಗಳಿಗೆ ಬಂಡವಾಳ ಹಾಕಿದ್ದಾರೆ. ತಾವು ಸೇರಿದಂತೆ ಮೂವರು ಮಂದಿ ಪಕ್ಷೇತರರು ಹಾಗೂ ಪ್ರಭಾವಿ ಮುಖಂಡರು ಕಾಂಗ್ರೆಸ್ ಸೇರಿರುವುದರಿಂದ ಜೆಡಿಎಸ್ ಆಟ ನಡೆಯಲ್ಲ ಎಂದು ತಿಳಿಸಿದರು. ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಕೋಟಗಾನಹಳ್ಳಿ ರಾಮಯ್ಯ ಒಳ್ಳೆಯವರು. ಆದರೆ, ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಅವರಲ್ಲಿ ಶಕ್ತಿ ಇಲ್ಲ. ಈ ಚುನಾವಣೆಯಲ್ಲಿ ಠೇವಣಿ ಕಳೆದುಕೊಳ್ಳುತ್ತಾರೆಂದು ತಿಳಿಸಿದರು.
ಇದು ಬದಲಾವಣೆ ಸಮಯ: ಕೇಶವ್
ಬಂಗಾರಪೇಟೆ ತಾಲೂಕಿನ ವಿವಿಧೆಡೆ ಜೆಡಿಎಸ್ ಪ್ರಚಾರ
ಬಂಗಾರಪೇಟೆ: ಕಳೆದ 25ವರ್ಷಗಳಿಂದ ಕೋಲಾರ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಈಗ ಬದಲಾವಣೆ ಸಮಯ ಬಂದಿದ್ದು, ಮತದಾರರು ಪುಡಿಕಾಸಿಗೆ ಮರುಳಾಗದೆ ಅಭಿವೃದ್ಧಿ ದೃಷ್ಟಿಯಿಂದ ಮತ ಚಲಾಯಿಸಬೇಕು ಎಂದು ಜೆಡಿಎಸ್ ಅಭ್ಯರ್ಥಿ ಕೆ.ಕೇಶವ್ ಹೇಳಿದರು.
ತಾಲೂಕಿನ ಮಾವಹಳ್ಳಿ, ಹುನ್ಕುಂದ, ಚಿಕ್ಕಅಂಕಂಡಹಳ್ಳಿ, ಕಾರಹಳ್ಳಿ, ಬೆಂಗನೂರು ಮತ್ತಿತರ ಪಂಚಾಯ್ತಿಗಳ ಕೇಂದ್ರಗಳಲ್ಲಿ ಚುನಾವಣೆ ಪ್ರಚಾರ ಕೈಗೊಂಡ ಅವರು, 'ನಾನು ಹಣ ಮಾಡುವುದಕ್ಕಾಗಿ ರಾಜಕೀಯಕ್ಕೆ ಬಂದಿಲ್ಲ. ಬದಲಾಗಿ ಬಡವರೇ ಅಧಿಕವಾಗಿರುವ ಕೋಲಾರ ಜಿಲ್ಲೆಯಲ್ಲಿ ಅವರ ಸ್ಥಿತಿಗತಿಗಳು ಸ್ವಾತಂತ್ರ್ಯ ಬಂದು 6ವರ್ಷಗಳಾದರೂ ಇನ್ನೂ ಬದಲಾಗಿಲ್ಲ ಇದನ್ನು ಬದಲಾಯಿಸಿ, ಕೋಲಾರ ಜಿಲ್ಲೆಯನ್ನು ದೇಶದಲ್ಲಿ ಗುರುತಿಸುವಂತೆ ಮಾಡಲು ಬಂದಿದೆ ಅವಕಾಶ ನೀಡುವಂತೆ' ಕೋರಿದರು. ಚಿಂತಾಮಣಿ ಮಾಜಿ ಶಾಸಕ ಡಾ.ಸುಧಾಕರ್ ಮಾತನಾಡಿದರು. ಅಭ್ಯರ್ಥಿ ಕೆ.ಕೇಶವ್ ಭೇಟಿ ನೀಡಿದ ಪ್ರತಿ ಪಂಚಾಯ್ತಿಯಲ್ಲಿಯೂ ಗ್ರಾಮಸ್ಥರು ಭವ್ಯ ಸ್ವಾಗತ ನೀಡಿ, ಮೆರವಣಿಗೆ ಮಾಡಿದರು.