ಜೆಡಿಎಸ್ ಜಾತ್ಯತೀತತೆ ಜನರಿಗೆ ಗೊತ್ತು ಎಂ.ವಿ. ರಾಜಶೇಖರ್
ಕೋಲಾರ: ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ದೃಷ್ಟಿಕೋನಕ್ಕೆ ವಿರುದ್ಧವಾಗಿ ನಡೆಯುತ್ತಿವೆ. ಜೆಡಿಎಸ್ ಸೇರಿದಂತೆ ಇತರ ಪ್ರಾದೇಶಿಕ ಪಕ್ಷಗಳು ಅವಕಾಶವಾದಿ ರಾಜಕಾರಣದಿಂದಾಗಿ ದೇಶದ ಆಡಳಿತ ವ್ಯವಸ್ಥೆಗೆ ಹೇಗೆ ತೊಡಕಾಗುತ್ತಿವೆ ಎಂಬುದು ಪ್ರತಿಯೊಬ್ಬರಿಗೂ ಗೊತ್ತು ಎಂದು ಕಾಂಗ್ರೆಸ್ ಹಿರಿಯ ಮುಖಂಡ, ವಿಧಾನ ಪರಿಷತ್ ಸದಸ್ಯ ಎಂ.ವಿ. ರಾಜಶೇಖರ್ ವ್ಯಂಗ್ಯವಾಡಿದರು.
ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್. ಮುನಿಯಪ್ಪ ಪರ ಪ್ರಚಾರಕ್ಕಾಗಿ ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ರಾಜಕಾರಣದಲ್ಲಿಂದು ವೈಯಕ್ತಿಕ ಸಮಸ್ಯೆಗಳಿಂದ ಅವ್ಯವಸ್ಥೆಗಳು ಹೆಚ್ಚಾಗುತ್ತಿದೆ, ದೇಶಕ್ಕೆ ಕಾಂಗ್ರೆಸ್ನಿಂದ ಮಾತ್ರ ಸುಭದ್ರ ಸರ್ಕಾರ ನೀಡಲು ಸಾಧ್ಯ ಹೊರತು ಬಿಜೆಪಿ ಸೇರಿದಂತೆ ಬೇರೆ ಯಾವುದೇ ಪಕ್ಷದಿಂದ ದೇಶದ ಅಭಿವೃದ್ಧಿ ನಿರೀಕ್ಷೆ ಮಾಡಲು ಸಾಧ್ಯವಿಲ್ಲವೆಂದರು.
ಸಂಸದೀಯ ವ್ಯವಸ್ಥೆಯ ವ್ಯವಹಾರಗಳಲ್ಲಿ ಹಗರಣಗಳು ಸಾಮಾನ್ಯವಾಗಿದ್ದು ಇದರ ವಿರುದ್ಧ ಯುಪಿಎ ಸರ್ಕಾರ ನೇರ ಕ್ರಮಕೈಗೊಂಡಿದೆ. ಆದರೆ ರಾಜ್ಯದಲ್ಲಿ ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ನಡೆದಷ್ಟು ಭ್ರಷ್ಟಾಚಾರಗಳು ಯಾವ ಸರ್ಕಾರದಲ್ಲೂ ನಡೆದಿಲ್ಲ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಹಲವಾರು ರೀತಿಯ ಅಭಿವೃದ್ಧಿ ಪರ ಯೋಜನೆಗಳನ್ನು ರೂಪಿಸಿದೆ. ಆದರೆ ಅವುಗಳನ್ನು ಅನುಷ್ಠಾನಕ್ಕೆ ತರುವ ಭಾಗ್ಯದ ಬಗ್ಗೆ, ಅಧಿಕಾರಿಗಳಿಗೆ ಬದ್ಧತೆ ಇಲ್ಲ ಇವರಲ್ಲಿ ಇಚ್ಚಾಶಕ್ತಿಯ ಕೊತೆಯಿಂದಾಗಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿದೆ ಎಂದರು.
ಕೆ.ಎಚ್. ಮುನಿಯಪ್ಪ ಅವರು ತಮ್ಮ ಅಧಿಕಾರವಧಿಯಲ್ಲಿ ರೈಲು, ರಸ್ತೆ, ಕೈಗಾರಿಕೆಗಳ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ, ಮುಂದೆ ನೀರಿನ ಸಮಸ್ಯೆ ನಿವಾರಣೆಗೆ ಪುನಃಶ್ಚೇತನ ಸೇರಿದಂತೆ ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತರಲಿದ್ದಾರೆ, ಈ ಎಲ್ಲಾ ಅಭಿವೃದ್ಧಿ ಜೊತೆಗೆ ಮತ್ತಷ್ಟು ಪ್ರಗತಿ ಕಾರ್ಯಗಳಾಗಬೇಕಾದರೆ ಕಾಂಗ್ರೆಸ್ನ್ನು ಬೆಂಬಲಿಸಬೇಕೆಂದು ತಿಳಿಸಿದರು.
ಸ್ವಿಸ್ ಬ್ಯಾಂಕ್ನಲ್ಲಿರುವ ಕಪ್ಪು ಹಣ ವಾಪಸ್ ತರಲು ಕಾಂಗ್ರೆಸ್ ನೇತೃತ್ವದ ಸರ್ಕಾರ ಏಕೆ ಪ್ರಯತ್ನಿಸುತ್ತಿಲ್ಲವೆಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಕಪ್ಪು ಹಣ ವಾಪಸ್ ತರಲು ಚಿಂತನೆ ನಡೆಸುತ್ತಿದೆ. ಆದರೆ, ಎನ್ಡಿಎ ಸರ್ಕಾರವಿದ್ದಾಗ ಏಕೆ ಪ್ರಯತ್ನ ನಡೆಸಲಿಲ್ಲವೆಂದು ಮರು ಪ್ರಶ್ನೆ ಹಾಕಿದರಲ್ಲದೆ, ಕಾಂಗ್ರೆಸ್ ಸರ್ಕಾರ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಲ್ಲಿ ಖಂಡಿತ ಕಪ್ಪು ಹಣದ ವಿಚಾರದಲ್ಲಿ ಆರ್ಥಿಕ ತಜ್ಞರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.
ನಾರು ಮಂಡಳಿ ನಿರ್ದೇಶಕ ಸಿ. ಗಂಗಾಧರ್, ನಗರಸಭೆ ಮಾಜಿ ಸದಸ್ಯ ಲಾಲ್ ಬಹದ್ದೂರ್ ಶಾಸ್ತ್ರಿ, ಕಾಂಗ್ರೆಸ್ ವಕ್ತಾರ ರಾಜೇಶ್ಸಿಂಗ್, ಹೊಳಲಿ ಪ್ರಕಾಶ್, ಕೆ.ಬಿ. ಬೈಲಪ್ಪ, ಸಿ.ಬಿ. ರವಿಶಂಕರ್ ಗುಪ್ತ, ಲಕ್ಷ್ಮೀನಾರಾಯಣರೆಡ್ಡಿ, ಬೆಳಗಾನಹಳ್ಳಿ ಮುನಿವೆಂಟಪ್ಪ, ವೆಂಕಟಪತ್ತೆಪ್ಪ ಇದ್ದರು.
ಕಾಂಗ್ರೆಸ್ ಪರ ಮತಯಾಚನೆ
ತಾಲೂಕಿನ ಮುರುಗಮಲ್ಲ ಗ್ರಾಮದ ಮಾಜಿ ಶಾಸಕ ಬೆಂಬಲಿತ ಹಿರಿಯ ಮುಖಂಡ ಬಿ.ಅಶ್ವತ್ಥನಾರಾಯಣರೆಡ್ಡಿ ಅವರು ಮುನಿಯಪ್ಪ ಅವರ ಪರ ಮತಯಾಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸುಧಾಕರ್ ಅವರ ಸ್ವಾರ್ಥ ರಾಜಕಾರಣಕ್ಕಾಗಿ ಜೆಡಿಎಸ್ ಅಭ್ಯರ್ಥಿ ಪರವಾಗಿ ಬೆಂಬಲ ಸೂಚಿಸಿದ್ದಾರೆ. ಇದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತನಾಗಿ ಸಂಘಟನೆ ಮಾಡುತ್ತಿರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಮಡರಾದ ಗಂಡ್ರಗಾನಹಳ್ಳಿ ಸುಬ್ಬಾರೆಡ್ಡಿ, ರಾಮಚಂದ್ರ, ವಕೀಲ ಸುಧಾಕರರೆಡ್ಡಿ, ಮಂಜುನಾಥರೆಡ್ಡಿ, ಕೊತ್ತಪಲ್ಲಿ ನಾರಾಯಣಸ್ವಾಮಿ, ಅಮೀರ್ಜಾನ್, ಮುರುಗಮಲ್ಲ ನಾಗರಾಜ್, ಮಿಲ್ಟ್ರಿ ಶ್ರೀನಿವಾಸರೆಡ್ಡಿ ಸೇರಿದಂತೆ ಇನ್ನೂ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.