ರಸ್ತೆ ಬದಿಯಲ್ಲೇ ತ್ಯಾಜ್ಯ: ಸವಾರರಿಗೆ ಕಿರಿಕಿರಿ
ಬೇರೇಡೆ ಸ್ಥಳಾಂತರಿಸಲು ಒತ್ತಾಯ
ಬಂಗಾರಪೇಟೆ: ಪಟ್ಟಣದಿಂದ ಕೋಲಾರಕ್ಕೆ ಹೋಗುವ ರಸ್ತೆಯ ಜೈನ್ ಶಾಲೆ ಮುಂಭಾಗದ ಬದಿಯಲ್ಲಿ ಹೊಟೇಲ್, ಕಲ್ಯಾಣ ಮಂಟಪ ಮತ್ತು ಮಾಂಸದಂಡಿಗಳ ತ್ಯಾಜ್ಯ ವಸ್ತುಗಳನ್ನು ಎಸೆಯಲಾಗುತ್ತಿದೆ. ಇದರಿಂದ ವಾಹನ ಸವಾರರಿಗೆ ಕಿರಿಕಿರಿಯಾಗುತ್ತಿದೆ. ಕೂಡಲೇ ತ್ಯಾಜ್ಯವನ್ನು ವಿಲೇವಾರಿ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮನೆಗಳು, ಹೊಟೇಲ್, ಕಲ್ಯಾಣ ಮಂಟಪಗಳಿಂದ ದಿನ ನಿತ್ಯ ಸಂಗ್ರಹವಾಗುವ ತ್ಯಾಜ್ಯವನ್ನು ಪುರಸಭೆ ಪ್ರತಿ ಮನೆಗೂ ತೆರಳಿ ಸಂಗ್ರಹ ಮಾಡುತ್ತಿದೆ. ಆ ತ್ಯಾಜ್ಯವನ್ನು ಪಟ್ಟಣದ ಹೊರವಲಯದಲ್ಲಿರುವ ಬ್ಯಾಡಬೆಲೆ ಗ್ರಾಮದಲ್ಲಿ ನಾಲ್ಕು ಎಕರೆಯನ್ನು ಪುರಸಭೆ ಜಮೀನು ಖರೀದಿಸಿ ಅಲ್ಲಿ ಡಂಪ್ ಮಾಡುತ್ತಿದೆ. ಆದರೆ, ತ್ಯಾಜ್ಯವನ್ನು ಭೂಮಿಯೊಳಗೆ ಹೂತು ಹಾಕದೇ ಮೇಲ್ಬಾಗದಲ್ಲೇ ಎಸೆದು ಬರುತ್ತಿರುವುದರಿಂದ ಕಸವೆಲ್ಲಾ ಸುತ್ತಮುತ್ತಲಿನ ಗ್ರಾಮಗಳ ಮನೆಗಳ ಮುಂದೆ ಹಾಗೂ ತೋಟಗಳಲ್ಲಿ ಕಸ ಸಂಗ್ರಹವಾಗಿ ಕಿರಿಕಿರಿಯುಂಟು ಮಾಡುತ್ತಿದೆ. ಹಾಗಾಗಿ, ಇಲ್ಲಿನ ತ್ಯಾಜ್ಯವನ್ನು ಬೇರೇಡೆ ಸ್ಥಳಾಂತರಿಸುವಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಏತನ್ಮಧ್ಯೆ, ಕೋಲಾರದ ನಗರದ ತ್ಯಾಜ್ಯವನ್ನು ಕೂಡಾ ಇಲ್ಲೇ ತಂದು ಸುರಿಯುತ್ತಿರುವುದರಿಂದ ಸಮಸ್ಯೆ ಮತ್ತಷ್ಟು ಬಿಗಾಡಿಯಿಸಿದೆ. ಈಗ ತ್ಯಾಜ್ಯ ವಿಲೇವಾರಿ ಮಾಡುತ್ತಿರುವ ಜಾಗ ಆಂಧ್ರ ಮತ್ತು ತಮಿಳುನಾಡಿನ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ರಸ್ತೆ ಪಕ್ಕದಲ್ಲಿದೆ. ಪ್ರತಿದಿನ ಸಾವಿರಾರು ವಾಹನಗಳು ಬಂದು ಹೋಗುತ್ತವೆ. ಇಂತಹ ರಸ್ತೆ ಪಕ್ಕದಲ್ಲಿ ಕೋಳಿ ಮಾಂಸದ ತ್ಯಾಜ್ಯ, ಹೊಟೇಲ್ ತ್ಯಾಜ್ಯ ತಂದು ಸುರಿದು ವಾಹನ ಸವಾರರಿಗೆ ತೊಂದರೆ ಉಂಟು ಮಾಡುತ್ತಿರುವುದಕ್ಕೆ ವಾಹನ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೆ ಕಾರಹಳ್ಳಿ ಪಂಚಾಯ್ತಿಯವರು ಇಲ್ಲವೆ ಪುರಸಭೆಯವರು ಗಮನಹರಿಸಿ ರಸ್ತೆ ಬದಿಯಲ್ಲಿ ಸುರಿಯುತ್ತಿರುವ ತ್ಯಾಜ್ಯಗಳನ್ನು ನಿಯಂತ್ರಿಸಿ ವಾಹನ ಸವಾರರಿಗೆ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಆಗ್ರಹಿಸಿದ್ದಾರೆ.