ರಾಮಪುರ: ಮತದಾನ ಬಹಿಷ್ಕಾರಕ್ಕೆ ನಿರ್ಧಾರ
ಕನ್ನಡಪ್ರಭ ವಾರ್ತೆ ಯಳಂದೂರು ಏ.3
ತಾಲೂಕಿನ ರಾಮಪುರ ಗ್ರಾಮದ ಜನರು ಸೌಲಭ್ಯದಿಂದ ವಚಿಂತರಾಗಿ ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿದ್ದು, ಲೋಕಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಮತ ನೀಡದಂತೆ ಗ್ರಾಮದಲ್ಲಿ ಸಭೆ ನಡೆಸಿ, ಮತದಾನ ಬಹಿಷ್ಕಾರ ಮಾಡುವ ನಿರ್ಧಾರ ಕೈಗೊಂಡಿದ್ದಾರೆ.
ತಾಲೂಕಿನ ರಾಮಪುರ ಗ್ರಾಮದಲ್ಲಿ 100 ದಲಿತ ಕುಟುಂಬಗಳು ಮಾತ್ರ ವಾಸಿಸುತ್ತಿದ್ದು, 50 ಕುಟುಂಬ ಯಳಂದೂರು ತಾಲೂಕಿನ ಗೌಡಹಳ್ಳಿ ಗ್ರಾಮ ಪಂಚಾಯ್ತಿಗೆ, 50 ಕುಟುಂಬ ಕೊಳ್ಳೇಗಾಲ ತಾಲೂಕಿನ ಕುಣಗಹಳ್ಳಿ ಗ್ರಾಪಂ ವ್ಯಾಪ್ತಿಗೆ ಸೇರಿವೆ. ಕಳೆದ 20 ವರ್ಷಗಳಿಂದಲೂ ಈ ಗ್ರಾಮಕ್ಕೆ ಯಾವುದೇ ಮೂಲ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಬರೀ ಭರವಸೆ ಅಷ್ಟೇ: ಅತ್ಯಂತ ಹಿಂದುಳಿದ ವರ್ಗದ ದಲಿತ ಜನಾಂಗ ವಾಸಿಸುವ ಗ್ರಾಮಕ್ಕೆ ಯಾವುದೇ ರೀತಿಯ ವಿಶೇಷ ಅನುದಾನ ನೀಡಿಲ್ಲ. ಈ ಭಾಗದಲ್ಲಿ ಗೆಲವು ಸಾಧಿಸಿದ ತಾಪಂ, ಜಿಪಂ, ಶಾಸಕರು, ಸಂಸದರು, ಈ ಗ್ರಾಮ ಯಳಂದೂರು ತಾಲೂಕಿನ ವ್ಯಾಪ್ತಿಗೆ ಸೇರಿರುವ ಬಗ್ಗೆ ಗೆದ್ದ ನಂತರ ಗ್ರಾಮವನ್ನು ಮರೆಯುತ್ತಾರೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಗ್ರಾಮಕ್ಕೆ ಭೇಟಿ ನೀಡುವ ಜನಪ್ರತಿನಿಧಿಗಳು, ಶಾಸಕರು, ಸಂಸದರು ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿ ಹೋಗುತ್ತಾರೆ ಎಂದು ಸಭೆಯಲ್ಲಿ ಗ್ರಾಮಸ್ಥರು ದೂರಿದ್ದಾರೆ.
ವರ್ಷದಲ್ಲಿ ಒಂದು ದಿನವಾದರೂ ನಮ್ಮ ಗ್ರಾಮದ ಸಮಸ್ಯೆಯನ್ನು ಕೇಳಿಲ್ಲ. ಸೂರಪುರ ಮತ್ತು ರಾಮಪುರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣ ಮಾಡಿಕೊಂಡುವುದಾಗಿ ಭರವಸೆ ನೀಡಿ 20 ವರ್ಷವಾದರೂ ಸೇತುವೆ ನಿರ್ಮಾಣವಾಗಿಲ್ಲ. ಇದ್ದರಿಂದ ಮಳೆಗಾಲದಲ್ಲಿ ಜನರು ಮತ್ತು ಶಾಲಾ ಮಕ್ಕಳು ಈ ರಸ್ತೆಯಲ್ಲಿ ತಿರುಗಾಡಲು ಸಾಧ್ಯವಾಗದೆ, ವಾರಗಟ್ಟಲೇ ಮನೆಗಳಲ್ಲಿ ಕುಳಿತು ಹೊರಗಡೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
ಮನವರಿಕೆ ಮಾಡಿಕೊಟ್ಟರೂ ಪ್ರಯೋಜನವಿಲ್ಲ: ಗ್ರಾಮ ಸಮರ್ಪಕವಾದ ರಸ್ತೆ, ಚರಂಡಿ, ಕುಡಿಯುವ ನೀರು, ಬೀದಿ ದೀಪ, ಸೇರಿದಂತೆ ಮೂಲ ಸೌಲಭ್ಯದಿಂದ ವಚಿಂತವಾಗಿದ್ದು; ಗ್ರಾಮದ ರಸ್ತೆ, ಚರಂಡಿ, ರಸ್ತೆ ಬದಿ, ಗಿಡ ಗಂಟಿಗಳನ್ನು ಗ್ರಾಮದ ಜನರು ವಂತಿಕೆ ಸಂಗ್ರಹಿಸಿ ದುರಸ್ತಿ ಪಡಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಅನೇಕ ಭಾರಿ ತಾಲೂಕು, ಜಿಲ್ಲಾ ಆಡಳಿತಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಿಕೊಟ್ಟರೂ ಪ್ರಯೋಜನವಾಗಿಲ್ಲ ಎಂದು ಹೇಳಿದ್ದಾರೆ.
ಆದ್ದರಿಂದ ಗ್ರಾಮಕ್ಕೆ ಮೂಲ ಸೌಲಭ್ಯ ಕಲ್ಪಿಸುವವರಿಗೆ ಮತದಾನ ಮಾಡಬಾರದು. ಗ್ರಾಮಕ್ಕೆ ಯಾವುದೇ ರಾಜಕೀಯ ಮುಖಂಡರು ಬಾರಬಾರದೆಂದು ಹಾಗೂ ಗ್ರಾಮದ ಜನರು ಒಗ್ಗಟ್ಟಿನಿಂದ ಮತ ಬಹಿಷ್ಕಾರ ಮಾಡಲು ಗ್ರಾಮದಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಂಡಿದ್ದಾರೆ.
ಸಭೆಯಲ್ಲಿ ಗ್ರಾಮದ ಹಿರಿಯರಾದ ಚಿಕ್ಕಣ್ಣ, ರಾಜೇಂದ್ರ, ಶಿವಸ್ವಾಮಿ, ಎಂ. ಮಹಾದೇವ, ಮಹೇಶ್, ಎಸ್. ಮೂರ್ತಿ, ಉಮೇಶ್, ದಲಿತ ಸಂಘಟನೆ ಮುಖಂಡ ರಾಮಪುರ ರಂಗಸ್ವಾಮಿ, ಮಹಿಳಾ ಸಂಘದ ಶೋಭಾ, ಶಿವಮ್ಮ, ಬೆಳ್ಳಗಮ್ಮ, ನೀಲಮ್ಮ, ಜಯಮ್ಮ, ಮಹಾದೇವಮ್ಮ, ಚಂದ್ರಮ್ಮ ಇದ್ದರು.