ವೀರಯ್ಯಗೆ ಟಿಕೆಟ್ ನೀಡಿದ್ದರೆ ಮುನಿಯಪ್ಪ ವಿರುದ್ಧ ಪ್ರಚಾರ!
ಕೋಲಾರ: ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ವಿರುದ್ಧ ಕಾರಣಾಂತರಗಳಿಂದ ಮುನಿಸಿಕೊಂಡಿದ್ದು ನಿಜ. ಆದರೆ, ಮೂಲ ಕಾಂಗ್ರೆಸಿಗನಾದ ನಾನು ಮತ್ತು ಬೆಂಬಲಿಗರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸುತ್ತೇವೆ. ಆ ಮೂಲಕ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈ ಬಲಪಡಿಸುತ್ತೇವೆ ಎಂದು ಪಕ್ಷೇತರ ಶಾಸಕ ವರ್ತೂರ್ ಆರ್.ಪ್ರಕಾಶ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ನಾನು ಕಾಂಗ್ರೆಸ್ಗೆ ಸೇರಲು ಎಲ್ಲ ಅರ್ಹತೆ ಇದೆ. ಕಾಂಗ್ರೆಸ್ ಯಾರೊಬ್ಬರ ಸ್ವತ್ತು ಅಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು ಕೆ.ಎಚ್.ಮುನಿಯಪ್ಪ ಪರವಾಗಿ ಕೆಲಸ ಮಾಡುವಂತೆ ತಿಳಿಸಿದ್ದಾರೆ. ಹೀಗಾಗಿ ಯಾವುದೇ ಷರತ್ತುಗಳಿಲ್ಲದೆ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಲು ನಿರ್ಧರಿಸಿದ್ದೇನೆ' ಎಂದರು.
ಏ.8ರಂದು ಕಾಂಗ್ರೆಸ್ ಸೇರ್ಪಡೆ?: ಏ.8ರಂದು ಕೋಲಾರಕ್ಕೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಬರಲಿದ್ದಾರೆ. ಇವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರಬೇಕೆಂಬ ಉದ್ದೇಶವಿದೆ. ಒಂದು ವೇಳೆ ಪಕ್ಷಕ್ಕೆ ಸೇರಲು ಸಾಧ್ಯವಾಗದಿದ್ದರೂ ಲೋಕಸಭಾ ಚುನಾವಣೆಯಲ್ಲಿ ಮುನಿಯಪ್ಪ ಪರವಾಗಿ ಪ್ರಚಾರ ಮಾಡಿ ಅಧಿಕ ಮತಗಳಿಂದ ಗೆಲ್ಲಿಸುವುದಾಗಿ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ನಜೀರ್ ಅಹಮ್ಮದ್ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಈಗ ಎಲ್ಲ ಸಮಸ್ಯೆ ನಿವಾರಣೆಯಾಗಿದೆ. ಬಿಜೆಪಿ ವರಿಷ್ಠರು ಬಲಗೈ ಜನಾಂಗಕ್ಕೆ ಸೇರಿದ ಡಿ.ಎಸ್.ವೀರಯ್ಯನವರಿಗೆ ಟಿಕೆಟ್ ನೀಡಿದ್ದರೆ ಖಂಡಿತವಾಗಿಯೂ ಮುನಿಯಪ್ಪ ವಿರುದ್ಧ ಪ್ರಚಾರ ಮಾಡುತ್ತಿದ್ದೆ ಎಂದೂ ಹೇಳಿದರು.
ವರ್ತೂರ್ ಬಣದ ಹಿರಿಯ ಮುಖಂಡ ಬೆಗ್ಲಿ ಪ್ರಕಾಶ್, ನಗರಸಭೆ ಸದಸ್ಯ ಮಂಜುನಾಥ್, ಸೋಮಶೇಖರ್,ಅಹಿಂದ ಜಿಲ್ಲಾಧ್ಯಕ್ಷ ರಾಜಣ್ಣ, ನಗರಸಭೆ ಮಾಜಿ ಅಧ್ಯಕ್ಷ ಮಧುಸೂದನ್, ನಜೀರ್ ಅಹಮ್ಮದ್, ವಕ್ಕಲೇರಿ ಗ್ರಾಪಂ ಸದಸ್ಯ ವಕ್ಕಲೇರಿ ರಾಜಪ್ಪ, ಮುಖಂಡರಾದ ಕೃಷ್ಣಾರೆಡ್ಡಿ ಇದ್ದರು.