ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಉತ್ಪಾದನೆ ಕುಸಿತಕ್ಕೆ ಸರ್ಕಾರದ ಧೋರಣೆಗಳೇ ಕಾರಣ

Rashmi Kasaragodu
Updated On : 5 Apr 2014, 2:25 am

ಚಿಕ್ಕಬಳ್ಳಾಪುರ: ದೇಶದಲ್ಲಿ ಆಹಾರೋತ್ಪನ್ನಗಳ ಉತ್ಪಾದನೆ ಕುಸಿತ ಕಾಣಲು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಮತ್ತು ವಿರೋಧ ಪಕ್ಷ ಬಿಜೆಪಿ ಧೋರಣೆಗಳೇ ಕಾರಣವಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಪೊರೇಟ್ ಕಂಪನಿಗಳ ಪರ ನಿಂತಿವೆ. ದೇಶೀಯ ಕೃಷಿಕರಿಗೆ ಸಂಕಷ್ಟವನ್ನುಂಟು ಮಾಡುತ್ತವೆ ಎನ್ನುವುದರ ಅರಿವಿದ್ದರೂ ಮಾರಕ ನೀತಿಗಳನ್ನು ಜಾರಿಗೆ ತರಲು ಮುಂದಿರುತ್ತವೆ. ಇದರ ಫಲವಾಗಿ ರೈತರು ಬೀದಿಪಾಲಾಗುತ್ತಿದ್ದಾರೆ.
 ದೇಶದಲ್ಲಿ ಆಹಾರೋತ್ಪನ್ನಗಳ ಉತ್ಪಾದನೆಯಲ್ಲಿ ಕುಸಿತ ಉಂಟಾಗಿ ಬೇರೆ ದೇಶಗಳನ್ನು ಅವಲಂಬಿಸಬೇಕಾದ ದುರ್ಗತಿ ಬರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ದೇಶೀಯ ರೇಷ್ಮೆ ಕೃಷಿಕರಿಗೆ ಅನುಕೂಲ ಮಾಡಿಕೊಟ್ಟು ರೇಷ್ಮೆ ಉತ್ಪಾದನೆಗೆ ಒತ್ತು ಕೊಡಬೇಕಾಗಿತ್ತು. ಆದರೆ, ವಿದೇಶಿ ರೇಷ್ಮೆ ಆಮದು ಸುಂಕವನ್ನು ಶೇ.35 ರಿಂದ ಶೇ.5 ಕ್ಕೆ ಇಳಿಸಿ ದೇಶೀಯ ರೇಷ್ಮೆ ಬೆಲೆ ಕುಸಿಯುವಂತೆ ಮಾಡಿತು. ಇದರಿಂದ ರೇಷ್ಮೆ ಕೃಷಿಕರು ಆರ್ಥಿಕವಾಗಿ ದಿವಾಳಿಯಾದರು. ಹಲವರು ರೇಷ್ಮೆ ಕೃಷಿಯನ್ನು ಬಿಟ್ಟರು.
  ಇನ್ನು ಹೆಚ್ಚಿಗೆ ಸಕ್ಕರೆ ಆಮದು ಮಾಡಿಕೊಂಡಿದ್ದರ ಫಲವಾಗಿ ಕಬ್ಬು ಬೆಳೆಗಾರರು ತೊಂದರೆ ಅನುಭವಿಸಿದರು. ಮತ್ತೊಂದೆಡೆ ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಬಡ ಮತ್ತು ಮಧ್ಯಮ ವರ್ಗದ ಜನರ ಮೇಲೆ ದುಷ್ಪರಿಣಾಮ ಬೀರಿತು.
  ಬಡ ಜನರ ಕಲ್ಯಾಣಕ್ಕಾಗಿ ಹಣದ ಕೊರತೆ ಇದೆ ಎಂದೇಳಿ ಕಾರ್ಪೊರೇಟ್ ಕಂಪನಿಗಳಿಗೆ ಕೋಟ್ಯಂತರ ರು.ಅನುದಾನ, ಅನಗತ್ಯ ವಿನಾಯಿತಿ ನೀಡಿದ್ದು ಬಡವಪರ ಕಾಳಜಿಯೇ ಎಂದು ವ್ಯಂಗ್ಯವಾಡಿದರು.
ಬಯಲುಸೀಮೆಯ ಭಾಗದ ಜನರು ಶಾಶ್ವತ ನೀರಾವರಿ ಯೋಜನೆಗಾಗಿ ಪರಿತಪಿಸುತ್ತಿದ್ದಾರೆ.
 ಇಲ್ಲಿನ ಅಂತರ್ಜಲ ಬರ ದೂರ ಮಾಡಲು ಪರಮಶಿವಯ್ಯನವರ ವರದಿ ಜಾರಿಗೆ ತರಬೇಕಾಗಿದೆ. ಆದರೆ, ಆಡಳಿತ ನಡೆಸಿದ ಸರ್ಕಾರಗಳು ಸ್ವಾರ್ಥ ಲಾಭಕ್ಕಾಗಿ ನೀರಾವರಿ ರಾಜಕೀಯ ಮಾಡಿಕೊಂಡು ಬರುತ್ತಿವೆ.
 ರೈತಪರ ನೀತಿಗಳಿಗಾಗಿ ಎಡಪಕ್ಷಗಳಿಗೆ ಬೆಂಬಲಿಸಬೇಕಾಗಿದೆ. ಸಿಪಿಎಂ ಅಭ್ಯರ್ಥಿ ಜಿ.ವಿ. ಶ್ರೀರಾಮರೆಡ್ಡಿ ಧ್ವನಿಎತ್ತಲು ಶಕ್ತಿ ನೀಡಬೇಕಾಗಿದೆ ಎಂದರು. ಗೋಷ್ಠಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜು, ಚನ್ನರಾಯಪ್ಪ, ಬಿ.ಎನ್. ಮುನಿಕೃಷ್ಣಪ್ಪ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement