ಏಳನೇ ಬಾರಿಗೆ ನನ್ನ ತಂದೆ ಗೆಲ್ಲಿಸಿ: ರೂಪಾ
ಕೆಜಿಎಫ್: ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಪರವಾಗಿ ಅವರ ಪುತ್ರಿ ರೂಪಾ ಶಶಿಧರ್ ಅವರು ಶುಕ್ರವಾರ ಕೆಜಿಎಫ್ ಕ್ಷೇತ್ರದ ಗ್ರಾಮೀಣ ಪ್ರದೇಶಗಳಲ್ಲಿ ಬಿರುಸಿನ ಪ್ರಚಾರ ನಡೆಸಿದರು.
ಕೋಲಾರ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ತಮ್ಮ ಶಕ್ತಿಗೆ ಮೀರಿ ಅಭಿವೃದ್ಧಿ ಕಾಮಗಾರಿ ಯೋಜನೆಗಳನ್ನು ಮುನಿಯಪ್ಪ ಅವರು ಜಾರಿಗೊಳಿಸಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲೆಯ ಮತದಾರರು ಅವರು ಮಾಡಿದ ಉತ್ತಮ ಸೇವೆಯನ್ನು ಗುರುತಿಸಿ, ಏಳನೇ ಬಾರಿಗೆ ಅವರನ್ನು ಆಶೀರ್ವದಿಸಬೇಕು ಎಂದರು.
ಮುಳಬಾಗೀಲು ಕ್ಷೇತ್ರದಲ್ಲಿ 1100 ಎಕರೆ ಪ್ರದೇಶದಲ್ಲಿ 1460 ಕೋಟಿ ವೆಚ್ಚದಲ್ಲಿ 15000 ಮಂದಿಗೆ ಉದ್ಯೋಗ ಕಲ್ಪಿಸುವ ರೈಲ್ ಕೋಚ್ ಕಾರ್ಖಾನೆ ಸ್ಥಾಪನೆ, ಕೋಲಾರ ಮತ್ತು ಚಿಕ್ಕಬಳ್ಳಾಪುರ ನಡುವೆ 440 ಕೋಟಿ ವೆಚ್ಚದಲ್ಲಿ ಗೇಜ್ ಪರಿವರ್ತನೆಯ ರೈಲು ಸಂಚಾರ ಆರಂಭ, ಕೆಜಿಎಫ್ ಚಿನ್ನದ ಗಣಿಗಳನ್ನು ಪುನಶ್ಚೇತನಗೊಳಿಸುವ ಯೋಜನೆಗೆ ಕೇಂದ್ರ ಸಂಪುಟ ಸಭೆಯ ಅನುಮೋದನೆ..
ಹೀಗೆ ಅನೇಕ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಜಾರಿ ಮಾಡಿದ್ದಾರೆ ಎಂದು ಅವರು ಹೇಳಿದರು.
ಜಿಲ್ಲೆಗೆ ಪರಿಚಯವಿಲ್ಲದ ಅಭ್ಯರ್ಥಿಗಳು ಯಾವ ಆಧಾರದ ಮೇಲೆ ಜನರ ಬಳಿ ಹೋಗಿ ಮತವನ್ನು ಯಾಚಿಸುತ್ತಾರೆ? ಎಂದ ಅವರು, ಜೆಡಿಎಸ್ಗೆ ಮತ್ತು ಬಿಜೆಪಿ ಅಭ್ಯರ್ಥಿಗಳಿಗೆ ಕೆ.ಹೆಚ್.ಮುನಿಯಪ್ಪ ಅವರನ್ನು ಟೀಕಿಸುವ ಯಾವುದೇ ನೈತಿಕತೆಯಿಲ್ಲ ಎಂದು ತಿಳಿಸಿದರು.
ಕೆಜಿಎಫ್ ಕ್ಷೇತ್ರದ ಬೇತಮಂಗಲ ಹೋಬಳಿ, ಸುಂದರಪಾಳ್ಯ ಹೋಬಳಿ ಹಾಗೂ ಕ್ಯಾಸಂಬಳ್ಳಿ ಹೋಬಳಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಿರುಸಿನ ಮತಯಾಚಿಸಿದರು.