ಖರ್ಗೆ ಸಿಎಂ ಆಗುವುದು ತಪ್ಪಿಸಿದ್ದು ಜೆಡಿಎಸ್
ಕೋಲಾರ: ಕಾಂಗ್ರೆಸ್ ಪಕ್ಷದಲ್ಲಿ ಬಲಗೈ ಜನಾಂಗದವರಿಗೆ ಅನ್ಯಾಯವಾಗುತ್ತಿದೆ ಎಂಬುವುದು ಸತ್ಯಕ್ಕೆ ದೂರವಾದ ಸಂಗತಿಯಾಗಿದ್ದು, ಈ ಪಕ್ಷದಲ್ಲಿ ದಲಿತರಿಗೆ ಸಿಕ್ಕಿರುವಷ್ಟು ಸ್ಥಾನಮಾನ ಯಾವುದೇ ಪಕ್ಷದಲ್ಲೂ ಸಿಗುವುದಿಲ್ಲ ಎಂದು ರೇಲ್ವೆ ಸಲಹಾ ಸಮಿತಿ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ಮಲ್ಲಿಕಾರ್ಜುನಖರ್ಗೆಯವರಿಗೆ ಮುಖ್ಯಮಂತ್ರಿ ಆಗುವ ಅವಕಾಶಗಳಿತ್ತು, ಜೆಡಿಎಸ್ ನಾಯಕ ದೇವೇಗೌಡರು ಸೋನಿಯಾಗಾಂಧಿಯವರಿಗೆ ಪತ್ರ ಬರೆದು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಬೇಕಾದರೆ ನಾವು ಹೇಳಿದವರನ್ನೇ ಸಿಎಂ ಮಾಡಬೇಕೆಂದು ಷರತ್ತು ವಿಧಿಸಿದ್ದರಿಂದ ಖರ್ಗೆ ಸಿಎಂ ಆಗುವುದು ತಪ್ಪಿತು. ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುತ್ತಾರೆಂದು ಧರ್ಮಸಿಂಗ್ ಅವರನ್ನು ಸಿಎಂ ಮಾಡಿ ಕೆಲವೇ ತಿಂಗಳಲ್ಲಿ ಅಧಿಕಾರದಿಂದ ಇಳಿಸಿದರೆಂದು ಆರೋಪಿಸಿದರು.
ಜೆಡಿಎಸ್ ಒಂದು ಕುಟುಂಬಕ್ಕೆ ಮಾತ್ರ ಅಧಿಕಾರ ಸೀಮಿತವಾಗಿದೆ. ಬಿಜೆಪಿ ಗರ್ಭಗುಡಿ ಸಂಸ್ಕೃತಿಗೆ ಮೀಸಲಾಗಿದೆ. ಕಾಂಗ್ರೆಸ್ನಲ್ಲಿ ಮಾತ್ರ ಸಾಮಾಜಿಕ ನ್ಯಾಯ ಕಾಮಬಹುದಾಗಿದೆ ಎಂದರು.
ಜೆಡಿಎಸ್ನಲ್ಲಿ ಹಲವಾರು ಮುಖಂಡರು ಇದ್ದರೂ ಆಂಧ್ರಪ್ರದೇಶದ ವ್ಯಾಪಾರಿಯೊಬ್ಬರಿಗೆ ಟಿಕೆಟ್ ನೀಡಲಾಗಿದೆ. ಆತನ ವಿರುದ್ದ ಹಲವಾರು ಆರೋಪಗಳಿದ್ದು ರಕ್ಷಣೆಗಾಗಿ ರಾಜಕೀಯ ಪಕ್ಷ ಅವಲಂಬಿಸಿಕೊಳ್ಳಲು ಚುನಾವಣೆಗೆ ಸ್ಪರ್ಧಿಸಿದ್ದಾರೆಂದು ದೂರಿದರು. ಬಾಲಾಜಿ ಚನ್ನಯ್ಯ ಮಾತನಾಡಿದರು. ಜಯದೇವ, ಅಶ್ವಥ್ ನಾರಾಯಣ, ಮುನಿವೆಂಕಟಪ್ಪ ಇದ್ದರು.