ಬಯಲು ಸೀಮೆ ಜನರ ಕಾಳಜಿ ಇಲ್ಲದ ಅಪ್ಪ-ಮಗ
ಡಾ. ಮಧುಸೀತಪ್ಪ ಆರೋಪ
ಕೋಲಾರ: ಬಯಲು ಸೀಮೆ ಜನರ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಕುಮಾರಸ್ವಾಮಿ ಅವರಿಗೆ ಕಾಳಜಿ ಇಲ್ಲ ಎಂದು ಕರ್ನಾಟಕ ನೀರಾವರಿ ವೇದಿಕೆಯ ಅಧ್ಯಕ್ಷ ಡಾ. ಮಧುಸೀತಪ್ಪ ಆರೋಪಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಅವರು ಸುದ್ಧಿಗಾರರೊಂದಿಗೆ ಮಾತನಾಡಿ, ಬಯಲು ಸೀಮೆ ಜಿಲ್ಲೆಗಳಿಗೆ ಡಾ.ಪರಮಶಿವಯ್ಯ ವರದಿ ಆಧಾರಿತ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಕ್ಕೆ ದೇವೇಗೌಡರು ಮತ್ತು ಕುಮಾರಸ್ವಾಮಿ ಆಸಕ್ತಿ ತೋರಲಿಲ್ಲ, ಕೆ.ಸಿ. ರೆಡ್ಡಿ ವರದಿ ಆಧಾರಿತ ಭದ್ರ ಮೇಲ್ದಂಡೆ ಯೋಜನೆ ಮತ್ತು ಮೇಕೆದಾಟು ಯೋಜನೆ ಜಾರಿ ಅವರಿಬ್ಬರ ಉದ್ದೇಶವಾಗಿದೆ ಎಂದು ದೂರಿದರು. ಪರಮಶಿವಯ್ಯ ವರದಿಯನ್ನು ಮೂಲೆಗುಂಪು ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಕೆ.ಸಿ. ರೆಡ್ಡಿ ಮತ್ತು ದೇಸಾಯಿ ಅವರು ಷಡ್ಯಂತ್ರ ನಡೆಸುತ್ತಿದ್ದಾರೆ, ಇವರಿಬ್ಬರನ್ನು ನೀರಾವರಿ ಸಲಹಾ ಸಮಿತಿಯಿಂದ ಹೊರ ಹಾಕದಿದ್ದರೆ ಬಯಲು ಸೀಮೆ ಜನರಿಗೆ ಅನ್ಯಾಯವಾಗುತ್ತದೆ ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಕುಮಾರಸ್ವಾಮಿಯವರು ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ತಾವು ಮುಖ್ಯಮಂತ್ರಿಯಾದ 48 ಗಂಟೆಗಳಲ್ಲಿ ಶಾಶ್ವತ ನೀರಾವರಿ ಯೋಜನೆಗೆ ಸಂಬಂಧಿಸಿದ ಕಡತಕ್ಕೆ ಸಹಿ ಹಾಕುವುದಾಗಿ ಹೇಳಿದ್ದರು. ಇದನ್ನು ನಂಬಿ ತಾವು ಜೆಡಿಎಸ್ ಪರ ಪ್ರಚಾರ ಮಾಡಿದ್ದು ನಿಜ. ಒಂದು ವೇಳೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದರೂ ಯೋಜನೆ ಅನುಷ್ಠಾನಕ್ಕೆ ಚಾಲನೆ ನೀಡಲು ಆಗುತ್ತಿರಲಿಲ್ಲ. ಏಕೆಂದರೆ ಶಾಶ್ವತ ನೀರಾವರಿಗೆ ಸಂಬಂಧಿಸಿದ ಯಾವುದೇ ಕಡತಗಳು ಸಿದ್ಧವಿರಲಿಲ್ಲ ಎಂದರು. ಇನ್ನೆರಡು ದಿನಗಳಲ್ಲಿ ರಾಜಕೀಯ ನಿರ್ಧಾರ ತಿಳಿಸುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಚೌಡಪ್ಪ ಇದ್ದರು.