ಮುನಿಯಪ್ಪ ಸೋಲು ಖಚಿತ: ಶೆಟ್ಟರ್
ಕಾಂಗ್ರೆಸ್ಗೆ ನಾಯಕತ್ವ ಕೊರತೆ: ಪ್ರಧಾನಿ ಅಭ್ಯರ್ಥಿ ಘೋಷಣೆ ಇಲ್ಲ
ಕನ್ನಡಪ್ರಭ ವಾರ್ತೆ, ಕೋಲಾರ, ಏ.4
ನರೇಂದ್ರ ಮೋದಿಯನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ ನಂತರ ದೇಶದಲ್ಲಿ ರಾಜಕೀಯ ಚಿತ್ರಣ ಬದಲಾಗಿದೆ. ಅಮೆರಿಕ ಸೇರಿದಂತೆ ಇತರ ರಾಷ್ಟ್ರಗಳಲ್ಲೂ ಮೋದಿ ನಾಯಕತ್ವದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆದರೆ, ಕಾಂಗ್ರೆಸ್ನಲ್ಲಿ ನಾಯಕತ್ವದ ಕೊರತೆಯಿಂದಾಗಿ ಪ್ರಧಾನಿ ಅಭ್ಯರ್ಥಿ ಘೋಷಣೆ ಮಾಡಲು ಆ ಪಕ್ಷ ವಿಫಲವಾಗಿದೆ. ಅಲ್ಲದೇ ಈ ಬಾರಿ ಮುನಿಯಪ್ಪ ಸೋಲು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಲೇವಡಿ ಮಾಡಿದರು.
ನಗರದ ಹೊರವಲಯದ ಹೊಟೇಲ್ನಲ್ಲಿ ಶುಕ್ರವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಅಭಿವೃದ್ಧಿಯ ಹರಿಕಾರ ಎಂಬ ಕಾರಣಕ್ಕೆ ದೇಶದ ಯುವಕರು, ಪ್ರಜ್ಞಾವಂತರು ಬಿಜೆಪಿ ಪರ ಒಲವು ತೋರುತ್ತಿದ್ದಾರೆ ಎಂದರು.
ಕೋಲಾರ ಕ್ಷೇತ್ರದಿಂದ ಆರು ಬಾರಿ ಗೆದ್ದಿರುವ ಕೆ.ಎಚ್. ಮುನಿಯಪ್ಪ ಸಾಧನೆ ಶೂನ್ಯ. ಶಾಶ್ವತ ನೀರಾವರಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ಬಿಜೆಪಿ ಸರ್ಕಾರವಿದ್ದಾಗ ಎತ್ತಿನಹೊಳೆ ಯೋಜನೆ ಜಾರಿಗಾಗಿ ಆಡಳಿತಾತ್ಮಕ ಮಂಜೂರಾತಿ ನೀಡಿ, ಬಜೆಟ್ನಲ್ಲಿ ಹೆಚ್ಚು ಹಣ ಮೀಸಲಿಡಲಾಗಿತ್ತು. ನಮ್ಮ ಸರ್ಕಾರ ಯೋಜನೆಯನ್ನು ಕಾಂಗ್ರೆಸ್ನವರು ಚುನಾವಣೆಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಈ ಬಾರಿ 20 ಸ್ಥಾನ: ಕಳೆದ ಬಾರಿ ಬಿಜೆಪಿ 19 ಸ್ಥಾನ ಗೆದ್ದಿತ್ತು. ಈ ಬಾರಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಕೋಲಾರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ. ನಾರಾಯಣಸ್ವಾಮಿ ಯೋಗ್ಯ ಅಭ್ಯರ್ಥಿ. ನರೇಂದ್ರ ಮೋದಿ ಅಲೆ ಹಾಗೂ ಪಕ್ಷದ ಕಾರ್ಯಕರ್ತರ ಶ್ರಮದಿಂದ ಗೆಲ್ಲುವುದು ಖಚಿತ ಎಂದರು.
ಕಾಂಗ್ರೆಸ್ಗೆ ನೈತಿಕತೆ ಇಲ್ಲ: ಬಿಜೆಪಿಯ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ಮುಖಂಡರಿಗೆ ಮಾತನಾಡಲು ನೈತಿಕತೆ ಇಲ್ಲ. ಯುಪಿಎ ಸರ್ಕಾರದಲ್ಲಿ ನಡೆದಿರುವ ಹಗರಣಗಳು ಈ ಬಾರಿಯ ಚುನಾವಣೆಯ ವಿಷಯಗಳಾಗಿದ್ದು, ಜನತೆ ದೇಶದ ವಿಚಾರವಾಗಿ ಚಿಂತನೆ ಮಾಡುತ್ತಿರುವುದರಿಂದ ಸ್ಥಳೀಯ ವಿಚಾರಗಳು ಗೌಣವಾಗುತ್ತವೆ ಎಂದು ತಿಳಿಸಿದರು. ಕೋಲಾರ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿಯ ಕೆಲವು ಮುಖಂಡರು ನಾರಾಯಣಸ್ವಾಮಿ ಸೋಲಿಸಲು ಕಾಂಗ್ರೆಸಿನ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿರುವ ಬಗ್ಗೆ ಕೇಳಿದಾಗ, ಆ ರೀತಿ ಬಿಜೆಪಿಯಲ್ಲಿ ಯಾರೂ ಮಾಡಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಒಳ ಒಪ್ಪಂದವಾಗಿರಬೇಕೆಂದು ಉತ್ತರಿಸಿದರು.
ಈ ಸಂದರ್ಭದಲ್ಲಿ ಅಭ್ಯರ್ಥಿ ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ, ಮಾಜಿ ಶಾಸಕ ವೈ. ಸಂಪಂಗಿ, ಬಿ.ಪಿ. ವೆಂಕಟಮುನಿಯಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಕೃಷ್ಣಾರೆಡ್ಡಿ, ಜಿಲ್ಲಾ ಕಚೇರಿ ಕಾರ್ಯದರ್ಶಿ ಮು. ರಾಘವೇಂದ್ರ, ನಗರಾಧ್ಯಕ್ಷ ಜಯಂತಿಲಾಲ್, ತಾಲೂಕು ಅಧ್ಯಕ್ಷ ಚಿನ್ನಾಪುರ ನಾರಾಯಣಸ್ವಾಮಿ, ಎಸ್ಸಿ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ವೆಂಕಟೇಶ್ ಮೌರ್ಯ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯೆ ಪ್ರಮೀಳಾ ಮಲ್ಲಿಕಾರ್ಜುನ್, ಸತ್ಯನಾರಾಯಣರಾವ್, ಜಿಲ್ಲಾ ವಕ್ತಾರ ಶಿಳ್ಳಂಗೆರೆ ಮಹೇಶ್ ಇದ್ದರು.