ಆಪ್ ಅಭ್ಯರ್ಥಿಯಿಂದ ರು. 11,958 ಬಾಕಿ
ಕೋಲಾರ: ಕೋಲಾರ ಕ್ಷೇತ್ರಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಪೈಕಿ ಆಮ್ ಆದ್ಮಿ ಪಾರ್ಟಿಯ ಕೋಟಿಗಾನಹಳ್ಳಿ ರಾಮಯ್ಯ ಸರ್ಕಾರದ ಬಿಎಸ್ಎನ್ಎಲ್ ಸಂಸ್ಥೆಗೆ ರು. 11,958 ಬಾಕಿ ಇರುತ್ತಾರೆ. ಉಳಿದಂತೆ ಯಾವ ಅಭ್ಯರ್ಥಿಯು ಸರ್ಕಾರಕ್ಕೆ ಬಾಕಿ ಇರುವುದಿಲ್ಲ ಎಂದು ಚುನಾವಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಸಾರ್ವಜನಿಕರಿಗೆ
ಅರಿವು ಕಾರ್ಯಕ್ರಮ
ಕೋಲಾರ: ಮುಳಬಾಗಲು ತಾಲೂಕು ಅಂಗನವಾಡಿ ಕಾರ್ಯಕರ್ತೆಯರಿಂದ ಲೋಕಸಭಾ ಸಾರ್ವತ್ರಿಕ ಚುನಾವಣೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಏ.6 ರಂದು ಮುಳಬಾಗಲು ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 10 ಗಂಟೆಗೆ ಕೋರ್ಟ್ ಸರ್ಕಲ್ನಲ್ಲಿ ಮಾನವ ಸರಪಳಿ ಏರ್ಪಡಿಸಿ ಘೋಷಣೆ ಕೂಗುವುದರೊಂದಿಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುವುದು. ನಂತರ ಮಧ್ಯಾಹ್ನ 12 ಗಂಟೆಗೆ ವಿಠಲನಾರಾಯಣಸ್ವಾಮಿ ದೇವಸ್ಥಾನದ ಸಮುದಾಯ ಭವನದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಕಾರ್ಯಾಗಾರ ಏರ್ಪಡಿಸಲಾಗಿದೆ.
ಮತದಾನದ ಅರಿವು ಮುಖ್ಯ
ಕೋಲಾರ: ಸಾಕ್ಷರ ಭಾರತ್ ಕಾರ್ಯಕ್ರಮದಡಿ ಜಿಲ್ಲಾ ಲೋಕ ಶಿಕ್ಷಣ ಸಮಿತಿ ವತಿಯಿಂದ ಮತದಾನ-ಸಾಕ್ಷರತೆ ಕುರಿತು ಜಿಲ್ಲಾ ಲೋಕ ಶಿಕ್ಷಣ ಸಭಾಂಗಣದಲ್ಲಿ ಶನಿವಾರ ತರಬೇತಿ ಹಮ್ಮಿಕೊಳ್ಳಲಾಗಿತ್ತು.
ಈ ತರಬೇತಿಗೆ ಜಿಪಂ ಸಿಇಒ ಹಾಗೂ ಸಾಕ್ಷರತಾ ಸಮಿತಿ ಅಧ್ಯಕ್ಷ ವಿನೋತ್ ಪ್ರಿಯ ಅಧ್ಯಕ್ಷತೆ ವಹಿಸಿದ್ದರು. ಲೋಕ ಶಿಕ್ಷಣ ನಿರ್ದೇಶನಾಲಯದ ಸಹಾಯಕ ನಿರ್ದೇಶಕ ಜಿ. ಸುಮತಿನಾಯ್ಕ್ ಅವರು, ಮತದಾನ ಕುರಿತು ತಿಳುವಳಿಕೆ ನೀಡಿದರು. ರಾಜ್ಯ ಸಂಪನ್ಮೂಲ ಕೇಂದ್ರ ಸಂಪನ್ಮೂಲ ವ್ಯಕ್ತಿಗಳಾದ ಮಮತ ಪ್ರಜಾಪ್ರಭುತ್ವ, ಮತದಾನ, ಗುರುತಿನ ಚೀಟಿ, ಚುನಾವಣೆ ನೀತಿ ಸಂಹಿತೆ ಇನ್ನಿತರ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು.
ಬಿಜೆಪಿ ಬೆಂಬಲಿಸಲು ಮಾಜಿ ಶಾಸಕ ಮನವಿ
ನೆಲಮಂಗಲ: ದೇಶವನ್ನು ಆರ್ಥಿಕವಾಗಿ ಸದೃಢಗೊಳಿಸಿ ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಬಿಜೆಪಿಯನ್ನ ಬೆಂಬಲಿಸಿ ಎಂದು ಮಾಜಿ ಶಾಸಕ ಎಂ.ವಿ.ನಾಗರಾಜು ಮನವಿ ಮಾಡಿದರು. ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡುವ ಶಕ್ತಿ ದೇಶದ ಎಲ್ಲಾ ಮಹಿಳೆಯರ, ಯುವಕರ ಕೈಯಲ್ಲಿದೆ ಎಂದರು.