ಆಪ್ಗೆ ಜಾಗೃತ ಮತದಾರರ ಬೆಂಬಲ: ರಾಮಯ್ಯ ವಿಶ್ವಾಸ
ಕೋಲಾರ: ಭ್ರಷ್ಟಾಚಾರದ ಮೇರು ಪರ್ವತ ಕಾಂಗ್ರೆಸ್ ಹಾಗೂ ಕೋಮುವಾದಿ ಬಿಜೆಪಿ ಒಂದೇ ಹಾವಿನ ಎರಡು ತಲೆಗಳು. ಈ ಬಾರಿ ಜಾಗೃತ ಮತದಾರರು ಪ್ರಜಾತಂತ್ರ ವ್ಯವಸ್ಥೆಯನ್ನು ಬಲಪಡಿಸಲು ಆಮ್ ಆದ್ಮಿ ಪಕ್ಷಕ್ಕೆ ಬೆಂಬಲ ನೀಡಲಿದ್ದಾರೆ ಎಂದು ಕೋಲಾರ ಕ್ಷೇತ್ರದ ಆಪ್ ಅಭ್ಯರ್ಥಿ ಕೋಟಿಗಾನಹಳ್ಳಿ ರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಬಿಜೆಪಿಯ ಬಳಿ ಅನೈತಿಕ ಬಂಡವಾಳ. ಇಂಥ ಪಕ್ಷಗಳ ವಿರುದ್ಧ ನಾವು ಘನತೆ ಹೀನ ರಾಜಕೀಯ ಯುದ್ಧ ಮಾಡಬೇಕಾಗಿದೆ ಎಂದು ವಿಷಾದಿಸಿದರು. ಮೋದಿಯನ್ನು ಮೊದಲು ಮನುಷ್ಯನನ್ನಾಗಿಸಿ ನಂತರ ಪ್ರಧಾನಿಯನ್ನಾಗಿ ಮಾಡಬೇಕಾಗಿದೆ, ಬಿಜೆಪಿ ರಕ್ತವನ್ನು ಹೀರುತ್ತಾ 'ಚಾಯ್ ಪೇ ಚರ್ಚಾ' ನಡೆಸುತ್ತಿದ್ದರೆ, ಕಾಂಗ್ರೆಸ್ ಚಹಾದಂತೆ ಕಾಣುವ ರಕ್ತವನ್ನು ಜನತೆಗೆ ಕುಡಿಸುತ್ತಿದೆ ಎಂದರು.
ಠೇವಣಿ ಹೋದರೆ ಚಿಂತೆ ಇಲ್ಲ: ಶಾಸಕ ವರ್ತೂರ್ ಪ್ರಕಾಶ್ ಅವರು ರಾಮಯ್ಯಗೆ ಠೇವಣಿ ಸಿಗುವುದಿಲ್ಲ ಎಂದಿದ್ದಾರೆ. ತುಂಬಾ ಸಂತೋಷದಿಂದಲೇ ಶಾಸಕರ ಹೇಳಿಕೆಯನ್ನು ಸ್ವಾಗತಿಸುತ್ತೇನೆ. ಏಕೆಂದರೆ, ಠೇವಣಿ ಹಣ ನನ್ನ ಸ್ವಂತದ್ದಲ್ಲ. ಹಣವಿಲ್ಲದ ನನ್ನಂಥವರನ್ನು ಹುಡುಕಿ ದೇಶಭಕ್ತ ಯುವಕರಿಂದ ಸಂಗ್ರಹಿಸಿರುವ ಪಕ್ಷದ ದೇಣಿಗೆ ಹಣದಿಂದ ತಾವು ಠೇವಣಿ ಪಾವತಿಸಿದ್ದು, ತಮಗೆ ಠೇವಣಿ ಹೋದರೆ, ತಮಗೆ ದೇಣಿಗೆ ನೀಡಿರುವ ದೇಶಾಭಿಮಾನಿಗಳ ಆಶಯಕ್ಕೆ ಆಗುವ ಸೋಲು ಎಂದರು. ಸ್ವತಃ ಸಾಹಿತಿಯಾಗಿರುವ ತಮ್ಮ ಬೆಂಬಲಕ್ಕೆ ಜ್ಞಾನಪೀಠ ಪುರಸ್ಕೃತರು ಯಾಕೆ ಬರಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಜ್ಞಾನಪೀಠ ಪಡೆದ ಮೊದಲ ಮೂವರನ್ನು ಹೊರತುಪಡಿಸಿದರೆ ಆನಂತರದವರೆಲ್ಲಾ ಜ್ಞಾನಕ್ಕೆ ಬದಲಾಗಿ ಪೀಠಕ್ಕೆ ಹಂಬಲಿಸಿದವರು ಎಂದು ಲೇವಡಿ ಮಾಡಿದರು. ಇದೇ ಸಂದರ್ಭದಲ್ಲಿ ಆಪ್ ಪ್ರಚಾರ ಭಾಗವಾಗಿರುವ ಕಲಾ ತಂಡಗಳಿಂದ ಡೊಳ್ಳು ಕುಣಿತ ಹಾಗೂ ಆಪ್ ಪ್ರಚಾರದ ಆಶಯ ಗೀತೆಗಳನ್ನು ಹಾಡಲಾಯಿತು.