ಕಳಪೆ ಬಿತ್ತನೆ ಬೀಜ: ಅಂಗಡಿಗೆ ರೈತರ ಮುತ್ತಿಗೆ
ಚಿಂತಾಮಣಿ: ಕಳಪೆ ಬೀಜ ಪೂರೈಸಿದ ರಸಗೊಬ್ಬರ ಮಾರಾಟ ಅಂಗಡಿ ಮೇಲೆ ರೈತರು ಮುತ್ತಿಗೆ ಹಾಕಿದ ಘಟನೆ ನಗರದ ವಿಜಯಲಕ್ಷ್ಮೀ ಕಲ್ಯಾಣ ಮಂಟಪ ಬಳಿ ಶನಿವಾರ ನಡೆಯಿತು.
ರಸಗೊಬ್ಬರ ಮಾರಾಟಗಾರ ಶ್ರೀನಿವಾಸಪುರ ತಾಲೂಕಿನ ಆಲವಾಟ ಗ್ರಾಮದ ರೈತರೊಬ್ಬರಿಗೆ ನಕಲಿ ಕೊತ್ತಂಬರಿ ಬೀಜ ನೀಡಿ ವಂಚಿಸಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಪ್ರತಿಭಟನೆ ವೇಳೆ ಅಂಗಡಿಯ ಮಾಲೀಕ ಹಾಗೂ ರೈತರ ನಡುವೆ ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಗಲಾಯಿತು. ಈ ಸುದ್ದಿ ತಿಳಿದ ತಕ್ಷಣ ನಗರ ಠಾಣೆ ಸಬ್ಇನ್ಸ್ಪೆಕ್ಟರ್ ಮುರಳಿ ಆಗಮಿಸಿ, ರೈತರನ್ನು ಸಮಾಧಾನಪಡಿಸಿದರು. ಈ ಮಧ್ಯೆ ಜಿಲ್ಲಾ ರಸಗೊಬ್ಬರ ಮಾರಾಟಗಾರರ ಸಂಘದ ಜಿಲ್ಲಾಧ್ಯಕ್ಷ ಡಾ.ಶಿವಣ್ಣ ರೈತರಿಗಾದ ನಷ್ಟವನ್ನು ಪರಿಹಾರ ರೂಪದಲ್ಲಿ ಕೊಡಿಸಿಕೊಡುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಕೈಬಿಡಲಾಯಿತು.