ಮುನಿಯಪ್ಪ ಹಟಾವೋ, ಕೋಲಾರ್ ಬಚಾವೋ!
ಕೋಲಾರ ಕ್ಷೇತ್ರದಲ್ಲಿ ಕಂಡುಬರುವ ಮನಸ್ಥಿತಿ: ಸುಧಾಕರ್ ರೆಡ್ಡಿ
ಜೆಡಿಎಸ್ ಅಭ್ಯರ್ಥಿ ಕೇಶವ ಪರ ಪ್ರಚಾರ, ಮುನಿಯಪ್ಪ ವಿರುದ್ಧ ತೀವ್ರ ವಾಗ್ದಾಳಿ
ಕನ್ನಡಪ್ರಭ ವಾರ್ತೆ, ಕೋಲಾರ, ಏ.5
ಕಾಂಗ್ರೆಸ್ದೆ ದ್ರೋಹ ಬಗೆದಿರುವ ಕೆ.ಹೆಚ್.ಮುನಿಯಪ್ಪ ಪ್ರತಿ ಚುನಾವಣೆಯಲ್ಲೂ ಬೇರೆಯವರನ್ನು ಗೆಲ್ಲಿಸಿದ್ದೇ ಹೆಚ್ಚು, ಹಾಗಾಗಿ ಈ ಬಾರಿ 'ಕೆ.ಎಚ್.ಮುನಿಯಪ್ಪ ಹಟಾವೋ ಕೋಲಾರ ಬಚಾವೋ' ಅಲೆ ಕ್ಷೇತ್ರದಲ್ಲಿ ಹೆಚ್ಚಾಗಿದೆ ಎಂದು ಮಾಜಿ ಶಾಸಕ ಡಾ.ಸುಧಾಕರರೆಡ್ಡಿ ಹೇಳಿದರು.
ಜೆಡಿಎಸ್ ಅಭ್ಯರ್ಥಿ ಕೇಶವ ಪರವಾಗಿ ತಾಲೂಕಿನ ಮುದುವಾಡಿ ಗ್ರಾಮದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ, ಕೆ.ಹೆಚ್.ಮುನಿಯಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.
25 ವರ್ಷದಿಂದ ಜನಪ್ರತಿನಿಧಿಯಾಗಿರುವ ಮುನಿಯಪ್ಪ ಅವರ ಅಭಿವೃದ್ಧಿ ಶೂನ್ಯ. ಇಷ್ಟು ವರ್ಷಗಳ ಕಾಲ ಕೇವಲ ರಾಜಕೀಯ ತಂತ್ರಗಾರಿಕೆ ಮಾಡಿದ್ದಾರೆ. ಈ ಚುನಾವಣೆಯಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಸಾಧನೆಗಳು ಎಂಬ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದರು. ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ಕೇಂದ್ರದಲ್ಲಿ ಅನೇಕ ಯೋಜನೆಗಳಿದ್ದು ಅದನ್ನು ಇಲ್ಲಿ ಜಾರಿ ಮಾಡಿದ್ದರೆ ನೀರಿನ ಸಮಸ್ಯೆ ಬಗೆಹರಿಸಬಹುದಿತ್ತು. ಆದರೆ, ಇದನ್ನು ಬಿಟ್ಟು ಇವರು ಮಾಡಿದ್ದು ಒಂದೊಂದು ಚುನಾವಣೆಯಲ್ಲೂ ಒಂದೊಂದು ವಿಧಾನಸಭಾ ಕ್ಷೇತ್ರದ ರಾಜಕೀಯ ಮುಖಂಡರನ್ನು ತಲೆ ಎತ್ತದಂತೆ ಮಾಡಿದ ಕೆಲಸ ಇವರಿಗೆ ಸಲ್ಲುತ್ತದೆ ಎಂದರು. ಚೌಡರೆಡ್ಡಿ, ಎಂ.ವಿ.ವೆಂಕಟಪ್ಪ, ಮಾಲೂರು ಎ.ನಾಗರಾಜ್, ನಿಸ್ಸಾರ್ ಅಹಮದ್, ಇವರ ಸ್ಥಿತಿಯಲ್ಲಾ ಎನಾಯ್ತು? ಇವರ ಸ್ಥಿತಿಗೆ ಮುನಿಯಪ್ಪ ಅವರೇ ಕಾರಣ. 2004ರಲ್ಲಿ ಶ್ರೀನಿವಾಸಗೌಡರ ಜೊತೆ ನಾನು, ಕೃಷ್ಣಬೈಕೇಗೌಡ ಅವರು ಕಾಂಗ್ರೆಸ್ಗೆ ಹೋದೆವು. ಬಳಿಕ ಇವರು ವರ್ತೂರ್ ಪ್ರಕಾಶ್ ಅವರನ್ನು ಇಲ್ಲಿಗೆ ಕರೆತಂದು ಬಿಟ್ಟರು. ವರ್ತೂರನ್ನು ಗೆಲ್ಲಿಸಿ ಪಕ್ಷದ ಅಭ್ಯರ್ಥಿ ಶ್ರೀನಿವಾಸಗೌಡರನ್ನು ಸೋಲಿಸಿದರು ಎಂದು ದೂರಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೆ.ಶ್ರೀನಿವಾಸಗೌಡ, ಮಾಜಿ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ, ಅಭ್ಯರ್ಥಿ ಕೇಶವ, ಜಿಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ಸದಸ್ಯ ಎಸ್.ಬಿ. ಮುನಿವೆಂಕಟಪ್ಪ, ಮಾಜಿ ಸದಸ್ಯ ನಾಗನಾಳ ಸೋಮಣ್ಣ, ಜೆಡಿಎಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷ ರಾಜೇಶ್ವರಿ, ಮುದುವಾಡಿ ಶ್ರೀನಿವಾಸ್, ಅಣ್ಣಿಹಳ್ಳಿ ನಾಗರಾಜ್ ಇದ್ದರು.