ಶಾಸಕರ ವಿರುದ್ಧ ಆರೋಪ: ಖಂಡನೆ
ಬಂಗಾರಪೇಟೆ: ಸರ್ಕಾರಿ ಶಾಲೆಗೆ ಸೇರಿದ ಜಮೀನು ಒತ್ತುವರಿ ಮಾಡಿಕೊಂಡಿರುವ ಜಿಪಂ ಸದಸ್ಯೆ ಹಾಗೂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿಮೋಲ್ ಮೋಹನ್ ಮೂರ್ತಿ ಅವರು ಕ್ಷೇತ್ರದ ಶಾಸಕರ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುವುದು ತರವಲ್ಲ ಎಂದು ತಾಪಂ ಮಾಜಿ ದಸ್ಯ ಪಿಚ್ಚಹಳ್ಳಿ ಗೋವಿಂದರಾಜು ಹೇಳಿದ್ದಾರೆ. ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರು ಸಿಮೋಲ್ ಮೋಹನ್ ಮೂರ್ತಿ ಅವರ ಅವ್ಯವಹಾರವನ್ನು ಬಯಲಿಗೆಳೆದ ಪರಿಣಾಮ ಅವರ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅವರಿಗೆ ತಾಕತ್ತು ಇದ್ದರೆ ಬಹಿರಂಗ ಚರ್ಚೆಗೆ ಬರಲಿ ಎಂದು ಆಹ್ವಾನಿಸಿದರು.
ವಲಸಿಗರನ್ನು ತಿರಸ್ಕರಿಸಿ: ಬಚ್ಚೇಗೌಡ
ಚಿಕ್ಕಬಳ್ಳಾಪುರ: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಎಂ. ವೀರಪ್ಪ ಮೊಯ್ಲಿ ವಲಸಿಗರಾಗಿ ಬಂದು ಜನರಿಗೆ ಮೋಸ ಮಾಡಲು ಹೊರಟಿದ್ದಾರೆ ಎಂದು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಎನ್. ಬಚ್ಚೇಗೌಡ ವ್ಯಂಗ್ಯವಾಡಿದರು.ನಗರದ ವಿನಾಯಕ ಸಮುದಾಯ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಘೋಷಣೆಯಾಗುವ ಮೊದಲೇ ಕ್ಷೇತ್ರದೆಲ್ಲೆಡೆ ಸುತ್ತಾಡಿ ಜನರ ಸಮಸ್ಯೆಗಳನ್ನು ತಿಳಿದುಕೊಂಡಿದ್ದೇನೆ. ನರೇಂದ್ರ ಮೋದಿಯನ್ನು ಪ್ರಧಾನಿಯನ್ನಾಗಿಸಿ ಬಿಜೆಪಿಗೆ ಮತನೀಡಬೇಕು. ಚುನಾವಣೆಯಲ್ಲಿ ತಮಗೆ ಬೆಂಬಲ ನೀಡಬೇಕೆಂದು ಪ್ರಚಾರ ಕೈಗೊಳ್ಳುತ್ತ ಬರುತ್ತಿದ್ದೇನೆ ಎಂದರು. ಡಾ. ಮಂಜುನಾಥ್, ತಮ್ಮೇಶ್ ಗೌಡ, ರಘು, ಎ.ವಿ. ಭೈರೇಗೌಡ, ಲಕ್ಷ್ಮೀನಾರಾಯಣ ಗುಪ್ತ ಇದ್ದರು.