ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

5ನೇ ದಿನಕ್ಕೆ ಕಾಲಿಟ್ಟ ಉಪವಾಸ ಸತ್ಯಾಗ್ರಹ

Rashmi Kasaragodu
Updated On : 7 Apr 2014, 1:20 am

ರಾಮನಗರ: ಮೂವತ್ತು ನೌಕರರ ಅಮಾನತು ಹಾಗೂ ಕಾರ್ಮಿಕ ವಿರೋಧಿ ನಿಲುವು ಖಂಡಿಸಿ ಬಿಡದಿ ಕೈಗಾರಿಕಾ ಪ್ರದೇಶದ ಟೊಯೋಟ ಕಿರ್ಲೋಸ್ಕರ್ ಮೋಟಾರ್ ಕಾರ್ಖಾನೆಯಲ್ಲಿ ಕಾರ್ಮಿಕರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹ 5ನೇ ದಿನವಾದ ಭಾನುವಾರವೂ ಮುಂದುವರೆದಿದೆ.
ಉಪವಾಸದಿಂದ ತೀವ್ರ ಅಸ್ವಸ್ಥಗೊಂಡ ಇಬ್ಬರು ನೌಕರರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶನಿವಾರ ರಾತ್ರಿ ತಮ್ಮ ಮೇಲೆ ಪೊಲೀಸರು ದೌರ್ಜನ್ಯ ನಡೆಸುವ ಮೂಲಕ ಚಳವಳಿ ಹತ್ತಿಕ್ಕಲು ಯತ್ನಿಸಿದ್ದಾರೆ ಎಂದು ಮುಷ್ಕರನಿರತರು ಆರೋಪಿಸಿದ್ದು, ಚಳವಳಿಗೆ ತೀವ್ರ ಸ್ವರೂಪ ನೀಡಲು ಮುಂದಾಗಿದ್ದಾರೆ.
ನೌಕರರ ಮುಷ್ಕರದ ಬಗ್ಗೆ ಕಾರ್ಖಾನೆ ಆಡಳಿತ ಮಂಡಳಿ ಸೊಪ್ಪು ಹಾಕುವ ಯಾವುದೇ ಲಕ್ಷಣವೂ ಗೋಚರಿಸಿಲ್ಲ. ಈ ಬಗ್ಗೆ ನೌಕರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಹೋರಾಟಕ್ಕೆ ರಾಜಕೀಯ ಮುಖಂಡರಿಂದಲೂ ಬೆಂಬಲ ವ್ಯಕ್ತವಾಗಿರುವುದು ನೌಕರರಿಗೆ ಮತ್ತಷ್ಟು ಬಲ ಸಿಕ್ಕಂತಾಗಿದೆ.
ಶನಿವಾರದಂದು ಮುಷ್ಕರ ಸ್ಥಳಕ್ಕೆ ಮಾಗಡಿ ಕ್ಷೇತ್ರದ ಶಾಸಕ ಎಚ್.ಸಿ.ಬಾಲಕೃಷ್ಣ, ರಾಮನಗರದ ಮಾಜಿ ಶಾಸಕ ಕೆ.ರಾಜು ಭೇಟಿ ನೀಡಿ ಬೆಂಬಲ ಘೋಷಿಸಿದ್ದರು. ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಭಾನುವಾರ ಮುಷ್ಕರ ಸ್ಥಳಕ್ಕೆ ಭೇಟಿ ನೀಡಿ, ಹೋರಾಟವನ್ನು ಬೆಂಬಲಿಸಿದ್ದಾರೆ. ಯೋಗೇಶ್ವರೆ ಭೇಟಿ ವೇಳೆ ಕಾರ್ಮಿಕ ಮುಖಂಡರು ಚಳವಳಿ ಹತ್ತಿಕ್ಕಲು ಆಡಳಿತ ಮಂಡಳಿಯು ಪೊಲೀಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಪೊಲೀಸರು ಆಡಳಿತ ಮಂಡಳಿ ಪರ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಶನಿವಾರ ರಾತ್ರಿ ಪೊಲೀಸ್ ಸಿಬ್ಬಂದಿ ನಮ್ಮ ಮೇಲೆ ಹಲ್ಲೆಗೂ ಮುಂದಾಗಿದ್ದರು. ಇಲ್ಲಿ ಅವರೆಲ್ಲ ಟೊಯೋಟ ಆಡಳಿತ ಮಂಡಳಿಯ ಏಜೆಂಟರಂತೆ ವರ್ತಿಸಿದ್ದಾರೆ. ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬೇಡಿಕೆಗಳ ಈಡೇರಿಕೆ ಸಂಬಂಧ ಆಡಳಿತ ಮಂಡಳಿ ಜತೆ ಚರ್ಚಿಸುವುದಾಗಿ ಯೋಗೇಶ್ವರ್ ಭರವಸೆ ನೀಡಿದ್ದು, ಪೊಲೀಸರೇನಾದರೂ ಕಿರುಕುಳ ನೀಡುವುದನ್ನು ಮುಂದುವರೆಸಿದರೆ ತಮ್ಮ ಗಮನಕ್ಕೆ ತರುವಂತೆ ನೌಕರರಿಗೆ ಸೂಚನೆ ನೀಡಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement