ಅಕ್ರಮ ಮರಳು ದಂಧೆಗೆ ಬಳಸುತ್ತಿದ್ದ ಕೊಪ್ಪರಿಗೆ ವಶ
ಕೆ.ಆರ್. ನಗರ: ಕಾವೇರಿ ನದಿಯಲ್ಲಿ ಅಕ್ರಮವಾಗಿ ತೆಗೆದು ಸಂಗ್ರಹಿಸಲಾಗಿದ್ದ ಸುಮಾರು ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಮರಳನ್ನು ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ತಾಲೂಕಿನ ಸಕ್ಕರೆ ಗ್ರಾಮದಲ್ಲಿ ಜರುಗಿದೆ. ದೂರು ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಮಾಯಗೌಡನಹಳ್ಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಭವ್ಯ ಮತ್ತು ಗ್ರಾಮ ಲೆಕ್ಕಾಧಿಕಾರಿ ನಾಗರಾಜ್ ಅವರು ಕಾವೇರಿ ನದಿಯ ದಡದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮರಳನ್ನು ವಶಕ್ಕೆ ತೆಗೆದುಕೊಂಡು ಎರಡು ಕೊಪ್ಪರಿಕೆಗಳನ್ನು ವಶಕ್ಕೆ ಪಡೆದಿದ್ದಾರೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಕ್ರಮವಾಗಿ ಸಂಗ್ರಹಿಸಿದ್ದ ಮರಳನ್ನು ಕೆ.ಆರ್. ನಗರದ ಮರಳು ಸಂಗ್ರಹ ಕೇಂದ್ರ ಸಾಗಿಸಲು ಕ್ರಮ ಕೈಗೊಂಡರು. ಸಕ್ಕರೆ ಗ್ರಾಮದ ಸಮೀಪದಲ್ಲಿರುವ ಚಾಮರಾಜ ಬಲ ಮತ್ತು ಎಡದಂಡೆ ನಾಲೆಗಳ ಅಣೆಕಟ್ಟೆಯ ಬಳಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದರೂ ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿದ್ದು, ಇದರಲ್ಲಿ ಪ್ರಭಾವಿಗಳು ಭಾಗಿಯಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಚುಂಚನಕಟ್ಟೆ ಹೋಬಳಿಯಾದ್ಯಂತ ನಿರಂತರವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ದೂರು ನೀಡಿದಾಗ ಮಾತ್ರ ದಾಳಿ ಮಾಡುವ ಅಧಿಕಾರಿಗಳು, ಉಳಿದ ವೇಳೆ ನಿರ್ಲಕ್ಷ್ಯ ತೋರುತ್ತಿದ್ದು, ಜಿಲ್ಲಾಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.