ಆರೆಸ್ಸೆಸ್‌ನಿಂದ ಯುಗಾದಿ ಉತ್ಸವ
ಮಾಲೂರು: ದೇಶದಲ್ಲಿ ಅತಂತ್ರರಾಗಿದ್ದ ಹಿಂದೂಗಳನ್ನು ಸಂಘಟಿಸಿ ಸಮಾಜದಲ್ಲಿ ಶಕ್ತಿಯುತವಾಗಿ ಬೆಳೆಸಿದ ಕೀರ್ತಿ ಡಾ.ಜಿ. ಕೇಶವ ಬಲಿರಾಮ್ ಹೆಡಗೆವಾರ್‌ಗೆ ಸಲ್ಲುತ್ತದೆ ಎಂದು ತುಮಕೂರು ವಿಭಾಗೀಯ ಸಂಘಟನಾ ಪ್ರಮುಖ್ ಪ್ರಕಾಶ್‌ರಾಜ್ ಹೇಳಿದರು.
ಯುಗಾದಿ ಹಬ್ಬದ ಅಂಗವಾಗಿ ಪಟ್ಟಣದಲ್ಲಿ ರಾಷ್ಟ್ರೀಯ ಸೇವಾ ಸಂಘ ಭಾನುವಾರ ಆಯೋಜಿಸಿದ್ದ ಯುಗಾದಿ ಉತ್ಸವದಲ್ಲಿ ಭಾಗವಹಿಸಿ ಮಾತನಾಡಿ, ಶಾಖೆ ಮೂಲಕ ಹಿಂದೂ ಸಮಾಜವನ್ನು ಶಕ್ತಿಯುತವಾಗಿ ಸಂಘಟಿಸಿದ ಡಾ. ಹೆಡಗೆವಾರ್ ಇತರರು ಹಿಂದೂ ಸಮಾಜದ ಮೇಲೆ ದಾಳಿ ಮಾಡುವಾಗ ಹತ್ತು ಸಲ ಯೋಚಿಸುವಂತೆ ಮಾಡಿದ್ದರು. ದೇಶದಲ್ಲಿ ಆರ್‌ಎಸ್‌ಎಸ್ ಸಂಘಟನೆಯನ್ನು ಸ್ಥಾಪಿಸಿರುವುದು ಇತರ ಸಮಾಜದ ಮೇಲೆ ದಾಳಿ ಮಾಡಲು ಅಲ್ಲ. ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಂಘಟನೆಯನ್ನು ಸಂಘಟಿಸಲಾಗುತ್ತಿದೆ ಎಂದರು. ವಿಭಾಗ ಸಂಘ ಚಾಲಕ ಡಾ. ಶಂಕರ್ ನಾಯಕ್ ಮಾತನಾಡಿದರು.
ಜಿಲ್ಲಾ ಕಾರ್ಯವಹ ಗೋವಿಂದ ರಾಜು, ತಾಲೂಕು ಕಾರ್ಯ ವಹ ಎನ್. ಶ್ರೀನಿವಾಸ್ ಇದ್ದರು. ಕಾರ್ಯಕ್ರಮಕ್ಕೂ ಮೊದಲು ರಾಷ್ಟ್ರೀಯ ಸೇವಾ ಸಂಘದ ಗಣಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಥ ಸಂಚಾಲನ ನಡೆಸಿದರು. ಗಣಗಳು ಹೊತ್ತಿದ್ದ ಧ್ವಜಕ್ಕೆ ಮನೆ-ಮನೆಗಳಲ್ಲಿ ಹೂವುನ್ನು ಎರಚಿ ಗೌರವ ಸಲ್ಲಿಸಿದರು.