ಕಾಂಗ್ರೆಸ್ ಪರ ಸಾಹಿತಿಗಳ ಚಮಚಾಗಿರಿ
ಚಿಕ್ಕಬಳ್ಳಾಪುರದಲ್ಲಿ ರೋಡ್ ಶೋ ನಡೆಸಿದ ಆರ್. ಅಶೋಕ ವ್ಯಂಗ್ಯ
ಚಿಕ್ಕಬಳ್ಳಾಪುರ: ನರೇಂದ್ರ ಮೋದಿ ಅಲೆಯ ಭಯದಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂಜರಿದ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಮತ್ತು ವಾರ್ತಾ ಸಚಿವ ಮನೀಷ್ ತಿವಾರಿ ಪ್ರತಿನಿಧಿಸುವ ಕಾಂಗ್ರೆಸ್ ಪಕ್ಷದ ಪರ ರಾಜ್ಯದಲ್ಲಿ ಕೆಲ ಸಾಹಿತಿಗಳು ಚಮಚಾಗಿರಿ ಮಾಡುತ್ತಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್ ವ್ಯಂಗ್ಯವಾಡಿದರು.
ನಗರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ಎನ್. ಬಚ್ಚೇಗೌಡರ ಪರ ರೋಡ್ ಶೋ ನಡೆಸಿ ಮತಯಾಚಿಸಿದ ಅವರು, ಕೆಲ ಸಾಹಿತಿಗಳು ತಮ್ಮ ಸ್ವಾರ್ಥ ಲಾಭಕ್ಕಾಗಿ ಕಾಂಗ್ರೆಸ್ ಹಿಂಬಾಲಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಾಹಿತಿಗಳು ಸಾಹಿತಿಯಾಗಿರಬೇಕು. ಸ್ವಾರ್ಥ ದೂರದೃಷ್ಟಿಯಿಂದ ರಾಜಕಾರಣ ಮಾಡುವುದಲ್ಲ. ಒಂದು ಪಕ್ಷದ ಕೈಗೊಂಬೆಗಳಾಗಿ ವರ್ತಿಸುತ್ತ ಪ್ರಚಾರ ಕೈಗೊಳ್ಳುತ್ತಿರುವ ಸಾಹಿತಿಗಳಿಗೆ ನೈತಿಕತೆ ಇರುತ್ತದಾ ಎಂದು ಪ್ರಶ್ನಿಸಿದರು.
ಸಂಸದ ಪಿ.ಸಿ. ಮೋಹನ್, ಮಾಜಿ ಸಚಿವ ಅರವಿಂದ ಲಿಂಬಾವಳಿ, ಬಿಜೆಪಿ ಅಭ್ಯರ್ಥಿ ಬಿ.ಎನ್. ಬಚ್ಚೇಗೌಡ ಮಾತನಾಡಿದರು. ಬಿಜೆಪಿ ಮುಖಂಡರಾದ ವೈ.ಎ.ನಾರಾಯಣಸ್ವಾಮಿ, ಡಾ. ಮಂಜುನಾಥ್, ಜ್ಯೋತಿರೆಡ್ಡಿ, ಡಿ.ಜೆ. ನಾಗರಾಜ್ ರೆಡ್ಡಿ, ಎ.ವಿ. ಭೈರೇಗೌಡ, ನಾರಾಯಣಪ್ಪ, ಚಂದ್ರಶೇಖರ್, ಬಲಿಜ ಸಂಘದ ರಾಜ್ಯಾಧ್ಯಕ್ಷ ವೇಣುಗೋಪಾಲ್ ಉಪಸ್ಥಿತರಿದ್ದರು.