ದೇಗುಲ ನಿರ್ಮಾಣಕ್ಕೆ ಸಹಕರಿಸಿ'
ಮಾಲೂರು: ಶ್ರೀ ಶಿರಡಿ ಸಾಯಿಬಾಬಾ ದೇವಾಲಯ ನಿರ್ಮಾಣಕ್ಕೆ ಪ್ರತಿಯೊಬ್ಬರು ಸಹಕರಿಸಬೇಕು ಎಂದು ಶ್ರೀ ಶಿರಡಿ ಸಾಯಿಬಾಬಾ ದೇವಾಲಯ ನಿರ್ಮಾಣ ಸಮಿತಿ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್ ರೆಡ್ಡಿ ಮನವಿ ಮಾಡಿದರು.
ಪಟ್ಟಣದ ತಾಲೂಕು ಕಚೇರಿ ರಸ್ತೆಯಲ್ಲಿ ಶಿರಡಿ ಸಾಯಿಬಾಬಾ ದೇವಾಲಯಕ್ಕಾಗಿ ಶ್ರೀನಾಥ್ ರೆಡ್ಡಿ ದಾನವಾಗಿ ನೀಡಿರುವ ನಿವೇಶನದ ತೆರವು ಕಾರ್ಯಕ್ರಮದ ಶ್ರಮದಾನದಲ್ಲಿ ಭಾಗವಹಿಸಿ ಮಾತನಾಡಿ, ಶಾಂತಿ ಧೂತ ಶ್ರೀ ಸಾಯಿಬಾಬ ರವರ ಕೃಪಾಕಟಾಕ್ಷ ಪ್ರತಿಯೊಬ್ಬರಿಗೂ ಸಿಗಬೇಕು ಎನ್ನುವ ದೃಷ್ಟಿಯಿಂದ ದೇವಾಲಯ ನಿರ್ಮಿಸಲಾಗುತ್ತಿದ್ದು, ಜನತೆ ಸಹಕಾರ ಮನೋಭಾವ ತೋರಬೇಕು ಎಂದರು. ಟ್ರಸ್ಟ್ ಉಪಾಧ್ಯಕ್ಷ ಮುನಿಕೃಷ್ಣಪ್ಪ, ವಾಸವಿ ಮಂಜು, ನರಸಿಂಹ, ರಾಘವೇಂದ್ರ, ಗಜೇಂದ್ರ, ವಾಸುದೇವ, ರವಿ, ಜೈಶೀಲರಾವ್ ಇದ್ದರು.
ಮಾಹಿತಿ ನೀಡದ ತಾಪಂ ಅಧಿಕಾರಿಗೆ ರು. 15000 ದಂಡ
ಶಿರಾ: ತಾಲೂಕು ಪಂಚಾಯಿತಿ ಸಾರ್ವಜನಿಕ ಮಾಹಿತಿ ಅಧಿಕಾರಿ ಅನಿಲ್‌ಕುಮಾರ್‌ಗೆ 15000 ರು. ಮಾಹಿತಿ ಆಯೋಗದಿಂದ ದಂಡ ವಿಧಿಸಲಾಗಿದೆ. ಮಹಾತ್ಮಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2009, 2010 ಮತ್ತು 2011 ಸಾಲುಗಳಲ್ಲಿ ಶಿರಾ ತಾಲೂಕಿನಲ್ಲಿ ಅನುಷ್ಠಾನಗೊಂಡ ಕಾಮಗಾರಿಗಳಿಗೆ ಸಂಬಂಧಪಟ್ಟ ಮಾಹಿತಿ ನೀಡುವಂತೆ ಮಾಹಿತಿ ಹಕ್ಕು ಕಾಯಿದೆಯಡಿ ಶಿರಾ ನಗರದ ಆನಂದ್ ಅವರು ಇಲ್ಲಿನ ಪಂಚಾಯಿತಿ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಮನವಿ ಸಲ್ಲಿಸಿದ್ದು ಮಾಹಿತಿ ಹಕ್ಕು ಕಾಯಿದೆಯಡಿ ನಿಗದಿಪಡಿಸಿದ್ದ ಅವಧಿಯಲ್ಲಿ ಮಾಹಿತಿ ನೀಡದಿರುವುದರಿಂದ ಮಾಹಿತಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಸದರಿ ಮೇಲ್ಮನವಿಯ ನಂತರವೂ ಮಾಹಿತಿ ನೀಡದಿರುವುದರಿಂದ ಕರ್ನಾಟಕ ಮಾಹಿತಿ ಆಯೋಗವು ಕೆಐಸಿ 5451 ಪಿಟಿಎನ್ 2013 ಮತ್ತು ಕೆಐಸಿ 5454 ಪಿಟಿಎನ್2013 ಮತ್ತು ಕೆಐಸಿ 5455 ಪಿಟಿಎನ್2013 ಈ ಮೂರು ಪ್ರಕರಣಗಳ ವಿಚಾರಣೆಯನ್ನು ನಡೆಸಿ ರಾಜ್ಯ ಮಾಹಿತಿ ಆಯುಕ್ತರಾದ ಟಿ.ರಾಮಾನಾಯಕ್ ಅವರು ಪ್ರಕರಣಗಳ ವಿಚಾರಣೆಯಲ್ಲಿ ಅರ್ಜಿದಾರರಿಗೆ ನಿಗದಿತ ಅವಧಿಯಲ್ಲಿ ಕೋರಿರುವ ಮಾಹಿತಿ ನೀಡದೇ ಇರುವುದಕ್ಕಾಗಿ, ಮಾಹಿತಿ ಕಾಯಿದೆ ವಿಧಿ 20 (1)ರಂತೆ ದಂಡ ವಿಧಿಸುವ ಕುರಿತು ಕಾರಣ ಕೇಳಿ ಜಾರಿ ಮಾಡಿದ ನೊಟೀಸಿಗೆ ಉತ್ತರಿಸದೇ ಇರುವುದಕ್ಕಾಗಿ, ಶಿರಾ ತಾಲೂಕು ಪಂಚಾಯಿತಿ ಸಾರ್ವಜನಿಕ ಮಾಹಿತಿ ಅಧಿಕಾರಿ ಅನಿಲ್‌ಕುಮಾರ್‌ಗೆ ತಲಾ 5000ರು.ಗಳಂತೆ ಮೂರು ಪ್ರಕರಣಗಳಲ್ಲಿ ಒಟ್ಟು 15000 ರು.ಗಳ ದಂಡವನ್ನು ವಿಧಿಸಿದ್ದಾರೆ.