ನೀರಿಗೆ ಆಗ್ರಹಿಸಿ ಅಧಿಕಾರಿಗಳಿಗೆ ಮುತ್ತಿಗೆ
ಚಿಂತಾಮಣಿ: ಕುಡಿಯುವ ನೀರಿಗೆ ಆಗ್ರಹಿಸಿ ಶಿಂಗಸಂದ್ರ ಗ್ರಾಮದ ದಲಿತ ಕೇರಿ ನಿವಾಸಿಗಳು ಅಧಿಕಾರಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ನಡೆದಿದೆ.
ತಾಲೂಕಿನ ಶಿಂಗಸಂದ್ರ ಗ್ರಾಮದಲ್ಲಿನ ದಲಿತ ಕಾಲೋನಿಗೆ ಕಳೆದ ಹಲವು ದಿನಗಳಿಂದ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಬೇಸಿಗೆ ಕಾಲ ಎದುರಾಗಿ ಕೊಳವೆ ಬಾವಿಗಳಲ್ಲಿ ನೀರಿಲ್ಲದೆ ಇಲ್ಲಿನ ದಲಿತ ಮಹಿಳೆಯರು ನೀರಿಗಾಗಿ ದಿನನಿತ್ಯ ಹಲವಾರು ಕಿ.ಮೀ. ದೂರದಿಂದ ನೀರ ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಾಲೂಕು ದಂಡಾಧಿಕಾರಿ ಜಿ.ವಿ.ಹನುಮಂತರೆಡ್ಡಿ ಹಾಗೂ ತಾಪಂ ಅಧಿಕಾರಿ ವಸಂತಕುಮಾರ್ ಮುಂದೆ ತಮ್ಮ ಅಳಲು ತೋಡಿಕೊಂಡರು. ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿದ ಅಧಿಕಾರಿಗಳು, ಶೀಘ್ರವೇ ಗ್ರಾಮಕ್ಕೆ ಕುಡಿಯುವ ನೀರು ಪೂರೈಸಲು ಕ್ರಮಕೈಗೊಳ್ಳಲಾಗುವುದು. ಸೂಕ್ತ ಜಾಗದಲ್ಲಿ ಬೋರ್ವೆಲ್ ಕೊರೆಸಲಾಗುವುದು ಎಂದು ಭರವಸೆ ನೀಡಿದರು. ತಕ್ಷಣಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಒಪ್ಪಿಗೆ ಸೂಚಿಸಿದರು.