ಭ್ರಷ್ಟಾಚಾರಿಗಳಿಗೆ ಮತ ಕೇಳುವ ನೈತಿಕತೆ ಇಲ್ಲವೇ ಇಲ್ಲ: ಜಿವಿಎಸ್
ಗುಡಿಬಂಡೆ: ಸಿಪಿಎಂ ಅಭ್ಯರ್ಥಿ ಜಿ.ವಿ. ಶ್ರೀರಾಮರೆಡ್ಡಿ ತಮ್ಮ ಕಾರ್ಯಕರ್ತರು ಹಾಗೂ ಬೆಂಬಲಿಗರೊಡನೆ ಪಟ್ಟಣದಲ್ಲಿ ರೋಡ್ ಶೋ ನಡೆಸಿ ಮತಯಾಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಚುನಾವಣೆ ಸಮಯದಲ್ಲಿ ಮತದಾರರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿವೆ. ಕೇಂದ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ತನ್ನ ಅಧಿಕಾರದ ಅವಧಿಯಲ್ಲಿ ಪೆಟ್ರೋಲ್, ಡೀಸೆಲ್, ಮತ್ತು ಗ್ಯಾಸ್ ಧರಗಳನ್ನು ಪದೇ ಪದೇ ಹೆಚ್ಚಿಸಿ ಬೆಲೆ ಏರಿಕೆಯೇ ತನ್ನ ಸಾಧನೆ ಎಂಬ ಕುಖ್ಯಾತಿಗೆ ಒಳಗಾಯಿತು. ಪ್ರಧಾನ ಮಂತ್ರಿ ಮನ ಮೋಹನ್ ಸಿಂಗ್ ಸಂಪುಟದ ಹಲವಾರು ಮಂತ್ರಿಗಳು ಬೃಹತ್ ಹಗರಣಗಳಲ್ಲಿ ಭಾಗಿಯಾಗಿ ಸುಮಾರು 15 ಲಕ್ಷ ಕೋಟಿ ರು.ಗಳಷ್ಟು ಸಾರ್ವಜನಿಕ ಹಣ ಗುಳುಂ ಮಾಡಿದ್ದಾರೆ ಎಂದು ಆರೋಪಿಸಿದರು.
ಕ್ಷೇತ್ರದ ಮಾಜಿ ಸಂಸದ ವೀರಪ್ಪ ಮೊಯ್ಲಿ, ಎತ್ತಿ ಹೊಳೆ ಮೂಲಕ ನೀರು ಹರಿಸಿ ಬರಪೀಡಿತ ಜಿಲ್ಲೆಗಳನ್ನು ಸಸ್ಯ ಶಾಮಲ ಮಾಡುವುದಾಗಿ ಸುಳ್ಳು ಹೇಳಿ ಮತಗಿಟ್ಟಿಸುವ ಹುನ್ನಾರದಲ್ಲಿದ್ದಾರೆ. ಜೆಡಿಎಸ್ ನಾಯಕ ದೇವೇಗೌಡರು, ಕುಟುಂಬ ರಾಜಕಾರಣಕ್ಕೆ ಒತ್ತು ಕೊಟ್ಟು ತಮ್ಮ ಮಕ್ಕಳು, ಮೊಮ್ಮಕ್ಕಳು ಮಾತ್ರ ಅಧಿಕಾರದಲ್ಲಿರಬೇಕೆಂದು ಬಯಸುತ್ತಾರೆ. ಪ್ರತಿ ಭಾಷಣದಲ್ಲೂ ನಾನು ಮಣ್ಣಿನ ಮಗ ಎಂದು ಹೇಳಿಕೊಳ್ಳುವ ಇವರು, ಅಧಿಕಾರವಿದ್ದಾಗ ಎಷ್ಟು ಜನ ರೈತರ ಸಮಸ್ಯೆಗಳನ್ನು ಬಗೆ ಹರಿಸಿದ್ದಾರೆ. ಇವರೆಲ್ಲಾ ಮಣ್ಣಿನ ಮಕ್ಕಳಾದರೆ ನಾವೇನು ಬಂಡೆ ಅಥವ ಕಲ್ಲಿನಿಂದ ಹುಟ್ಟಿ ಬಂದವರೆ ಎಂದು ಪ್ರಶ್ನಿಸಿದರು. ಪ್ರಜಾಪ್ರಭುತ್ವದ ಉಳಿವಿಗಾಗಿ, ಜನ ಪರ ಸರ್ಕ್ಕಾರಕ್ಕಾಗಿ ಮತದಾರರು ಈ ಬಾರಿಯ ಲೋಕ ಸಭಾ ಚುನಾವಣೆಯಲ್ಲಿ ಸಿಪಿಎಂ ಪಕ್ಷವನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು. ಪಕ್ಷದ ಮುಖಂಡರಾದ ಹನುಮಂತರೆಡ್ಡಿ, ಬ್ರಾಹ್ಮಣರ ಹಳ್ಳಿ ಅಶ್ವತ್ಥಪ್ಪ, ಹಳೆ ಗುಡಿಬಂಡೆ ಲಕ್ಷೀ ನಾರಾಯಣ, ಗುತ್ತಿಗೆದಾರ ಭ್ಯೆರರೆಡ್ಡಿ, ಸಾವಿತ್ರಮ್ಮ ಇದ್ದರು.