ಮುನಿಯಪ್ಪಗೆ ಅತಿ ಸುಲಭ ಜಯ: ಶಾಸಕ
ಬಂಗಾರಪೇಟೆ: ಅತಿ ಸುಲಭ ಹಾಗೂ ಅಧಿಕ ಮತಗಳಿಂದ ರಾಜ್ಯದಲ್ಲಿ ಏಳನೇ ಬಾರಿ ಸಂಸತ್ ಪ್ರವೇಶ ಮಾಡಲಿರುವ ಏಕೈಕ ಅಭ್ಯರ್ಥಿ ಎಂದರೆ ಕೆ.ಎಚ್.ಮುನಿಯಪ್ಪ ಅವರು ಮಾತ್ರ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಭವಿಷ್ಯ ನುಡಿದರು.
ಕಾಮಸಮುದ್ರ ಪಂಚಾಯ್ತಿಯಲ್ಲಿ ಭಾನುವಾರ ಬೈಕ್ ರ್ಯಾಲಿ ನಡೆಸಿದ ಬಳಿಕ ಮಾತನಾಡಿದ ಅವರು, 'ಮುನಿಯಪ್ಪ ಸೌಮ್ಯ ರಾಜಕಾರಣಿ. ಎಲ್ಲಾ ವರ್ಗಗಳ ಜತೆ ನಿಕಟ ಸಂಪರ್ಕ ಹೊಂದಿದ್ದಾರೆ. ಮತ್ತೆ ಅವರು ಗೆಲ್ಲುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ವಿರೋಧ ಪಕ್ಷಗಳು ಎಷ್ಟೇ ಟೀಕೆ ಮಾಡಿದರೂ ಕೋಲಾರ ಕ್ಷೇತ್ರ ಕಾಂಗ್ರೆಸ್ನ ಭದ್ರಕೋಟೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ' ಎಂದರು. ಶಾಸಕರ ಬೈಕ್ ರ್ಯಾಲಿ ಬಳಿಕ ಸ್ಥಳೀಯ ಅನೇಕ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರಿದರು. ಕೆ.ಚಂದ್ರಾರೆಡ್ಡಿ, ಮಂಜುನಾಥ್, ವೆಂಕಟರಾಮರೆಡ್ಡಿ, ಪಿಚ್ಚಹಳ್ಳಿ ಗೋವಿಂದರಾಜು, ವೆಂಕಟೇಶಗೌಡ, ಬಾಬು, ಜಯಣ್ಣ, ಅಮರೇಶ್, ರಂಗಾಚಾರಿ ಸೇರಿ ಅನೇಕರು ಹಾಜರಿದ್ದರು.