ನೀರು ತರದಿದ್ದರೆ ಸುಟ್ಟು ಬಿಡಿ: ಮೊಯ್ಲಿ ಸವಾಲ್
ಬಾಗೇಪಲ್ಲಿ: ಮುಂದಿನ 3 ವರ್ಷಗಳಲ್ಲಿ ಬರಡು ಜಿಲ್ಲೆಗಳಿಗೆ ಎತ್ತಿನಹೊಳೆಯಿಂದ ನೀರು ಹರಿಸೇ ತೀರುತ್ತೇನೆ. ಒಂದು ವೇಳೆ ನೀರು ಹರಿಸದಿದ್ದಲ್ಲಿ ನನ್ನ ಪ್ರತಿಕೃತಿ ಬದಲಿಗೆ ಜೀವಂತವಾಗಿಯೇ ನನ್ನನ್ನೇ ಸುಟ್ಟುಬಿಡಿ ಎಂದು ಚಿಕ್ಕಬಳ್ಳಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಸಚಿವ ಎಂ.ವೀರಪ್ಪ ಮೊಯ್ಲಿ ಹೇಳಿದರು.
ತಾಲೂಕಿನ ದೇವರಗುಡಿಪಲ್ಲಿ ಗ್ರಾಮದಲ್ಲಿ ಮತ ಪ್ರಚಾರ ಕೈಗೊಂಡು ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆ ವಿಳಂಬಕ್ಕೆ ರಾಜ್ಯದಲ್ಲಿ ಆಡಳಿತದಲ್ಲಿದ್ದ ಬಿಜೆಪಿ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಆರೋಪಿಸಿದರು.
ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಈ ಯೋಜನೆಗೆ 15 ಸಾವಿರ ಕೋಟಿ ಕೇಳಿದೆ. ಆದರೆ, 13 ಸಾವಿರ ಕೋಟಿ ಹಣ ನೀಡಿ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಾಗಿದೆ. ಈ ಸಂಬಂಧ ಜೆಡಿಎಸ್, ಬಿಜೆಪಿ ಮತ್ತು ಸಿಪಿಎಂ ಮುಖಂಡರು ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ, 'ಕಳೆದ 5 ವರ್ಷದ ಆಡಳಿತ ಅವಧಿಯಲ್ಲಿ ಕೇಂದ್ರ ಸಚಿವ ವೀರಪ್ಪಮೊಯಿಲಿರವರು ಜನಸಾಮಾನ್ಯರ ಸಮಸ್ಯೆಗಳಿಗೆ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ಮೊಯ್ಲಿ ಅವರನ್ನು ಅಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು' ಎಂದರು.
ಪ್ರಚಾರ: ಇದಕ್ಕೂ ಮುನ್ನ ತಾಲ್ಲೂಕಿನ ಮಿಟ್ಟೇಮರಿ, ಪಾತಪಾಳ್ಯ ಗ್ರಾಮಗಳಲ್ಲಿ ಇಂದು ಮತಪ್ರಚಾರ ನಡೆಸಿದರು. ಕೆಪಿಸಿಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಸೇರಿದಂತೆ ಹಲವು ಮುಖಂಡರು ಮಾತನಾಡಿದರು.
ವಿಧಾನಪರಿಷತ್ ಸದಸ್ಯ ಎಂ.ಆರ್.ಸೀತಾರಾಂ, ಪ್ರೊ.ಕೆ.ಇ.ರಾಧಾಕೃಷ್ಣ, ಕೆಪಿಸಿಸಿ ಸದಸ್ಯ ಎಂ.ಬಿ.ಚಿಕ್ಕನರಸಿಂಹಯ್ಯ, ಮುಖಂಡರಾದ ಚೆಂಡೂರು ವೆಂಕಟೇಶ್, ರಘುವೀರಶರ್ಮ, ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ವಿ.ಕೃಷ್ಣಪ್ಪ, ಪ್ರೊ.ನಾರೇಮದ್ದೇಪಲ್ಲಿ ನರಸಿಂಹಯ್ಯ ಮುಂತಾದವರು ಇದ್ದರು.