ಪತಿ ಪರ ಪತ್ನಿ, ತಂದೆ ಪರ ಪುತ್ರಿ ಪ್ರಚಾರ
ಕನ್ನಡಪ್ರಭ ವಾರ್ತೆ, ಕೋಲಾರ, ಏ.7
ಇತ್ತೀಚಿನ ದಿನಗಳಲ್ಲಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಪರವಾಗಿ ರಕ್ತ ಸಂಬಂಧಿಗಳು ಬೀದಿಗಿಳಿದು ಮತಯಾಚನೆ ಮಾಡುವುದು ಹೆಚ್ಚಾಗುತ್ತಿದೆ.
ಕೋಲಾರ ಮೀಸಲು ಕ್ಷೇತ್ರದಲ್ಲೂ ಅಭ್ಯರ್ಥಿಗಳ ಪರವಾಗಿ ಪತ್ನಿ, ಪುತ್ರಿ, ಪುತ್ರರು ಸೇರಿದಂತೆ ಇತರೆ ರಕ್ತ ಸಂಬಂಧಿಗಳು ಪ್ರಚಾರ ಕಣಕ್ಕಿಳಿದು ಗಮನ ಸೆಳೆಯುತ್ತಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಪರ ಪತ್ನಿ ನಾಗರತ್ನಮ್ಮ ಅವರಿಗಿಂತ ಪುತ್ರಿ ರೂಪಾ ಶಶಿಧರ್ ಹೆಚ್ಚು ಶ್ರಮಿಸುತ್ತಿದ್ದಾರೆ. ಕೆಜಿಎಫ್ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ವಹಿಸಿರುವ ರೂಪಾ ತಂದೆ ಗೆಲವಿಗಾಗಿ ನಿತ್ಯ 18 ಗಂಟೆ ಕಾಲ ಗ್ರಾಮೀಣ ಪ್ರದೇಶದಲ್ಲಿ ಮತದಾರರನ್ನು ಭೇಟಿಯಾಗಿ ಕಾಂಗ್ರೆಸ್ ಪರ ಓಟು ಕೇಳುತ್ತಿದ್ದಾರೆ.
ಬೆಳಿಗ್ಗೆ 6ಗಂಟೆಗೆ ಮನೆಯಿಂದ ಹೊರಟರೆ ಮನೆ ಸೇರುವುದು ರಾತ್ರಿ 11.30ಕ್ಕೆ, ಊಟ ಮಾಡಿ ಮಲಗುವುದು 12 ಗಂಟೆಗೆ.
ಮನೆಯಿಂದ ಹೊರಡುವಾಗ ಹೊಟೇಲ್ ಇಲ್ಲವೇ ಕಾರ್ಯಕರ್ತರ ಮನೆಯಲ್ಲಿ ಲಘು ಉಪಹಾರ ಸ್ವೀಕರಿಸುತ್ತಾರೆ. ಪ್ರಚಾರದ ಒತ್ತಡ ಹೆಚ್ಚಿದ್ದಲ್ಲಿ ಮಾರ್ಗ ಮಧ್ಯದಲ್ಲೇ ಬಿಸ್ಕತ್ ಸೇವಿಸಿ ಮತಯಾಚನೆ ಮುಂದುವರೆಸುತ್ತಾರೆ.
ರೂಪಾ ಅವರದ್ದು ಕೇಂದ್ರ ಸಚಿವರ ಪುತ್ರಿಯಾದರೂ ಸರಳ ಜೀವನ. ಕೊರಳಲ್ಲಿ ಕಾಣುವುದು ಕರಿಮಣಿಗಳ ಮಾಂಗಲ್ಯ ಸರ, ಇದು ಕೇವಲ ಚುನಾವಣಾ ಸಂದರ್ಭದ ಗಿಮಿಕ್ ಅಲ್ಲ, ಮೊದಲಿನಿಂದಲೂ ಇದೇ ರೀತಿಯ ಸರಳ ಜೀವನ ಸಾಗಿಸುತ್ತಿದ್ದಾರೆ ಎಂದು ಪತ್ನಿ ರೂಪಾ ಬಗ್ಗೆ ಪತಿ ಶಶಿಧರ್ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
ಮಾತ್ರವಲ್ಲ, 'ಆಶಾದೀಪ' ಸ್ವಯಂ ಸೇವಾ ಸಂಸ್ಥೆ ಮೂಲಕ ಹಲವು ವರ್ಷಗಳಿಂದ ಸಮಾಜ ಸೇವೆ ಮಾಡುತ್ತಿದ್ದಾರೆ, ತಂದೆ ಗೆದ್ದರೆ ಬಡವರಿಗೆ ಅನುಕೂಲವಾಗುತ್ತದೆ ಎಂಬುದು ರೂಪಾ ನಂಬಿಕೆ ಎನ್ನುತ್ತಾರೆ ಅವರ ಪತಿ.
ಇನ್ನು ಬಿಜೆಪಿಯ ಎಂ.ನಾರಾಯಣಸ್ವಾಮಿ ಪತ್ನಿ ಸರಸ್ವತಮ್ಮ ಪತಿ ಪರವಾಗಿ ಭರ್ಜರಿಯಾಗಿಯೇ ಪ್ರಚಾರ ಕೈಗೊಂಡಿದ್ದಾರೆ. ವಿಧಾನಸಭಾ ಚುನಾವಣೆಗೆ ಅವರು ಸ್ಪರ್ಧಿಸುತ್ತಿದ್ದಾಗ ತಾವು ಹೆಚ್ಚಾಗಿ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಇದು ದೊಡ್ಡ ಚುನಾವಣೆ, ಗಂಡ ಎಲ್ಲಾ ಕಡೆ ಹೋಗಿ ಮತದಾರರನ್ನು ಭೇಟಿಯಾಗಲು ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಪತಿ ಪರವಾಗಿ ಕೆಲಸ ಮಾಡುವುದು ನನ್ನ ಧರ್ಮ. ಆರೋಗ್ಯ ಅಷ್ಟಾಗಿ ಚನ್ನಾಗಿಲ್ಲವಾದರೂ ದಿನಕ್ಕೆ ಐದಾರು ಗಂಟೆ ಪ್ರಚಾರ ಕಾರ್ಯದಲ್ಲಿ ತೋಡಗಿದ್ದೇನೆ. ಮಕ್ಕಳೂ ತಂದೆಯ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸರಸ್ವತಮ್ಮ ತಿಳಿಸಿದ್ದಾರೆ.ಜೆಡಿಎಸ್ ಅಭ್ಯರ್ಥಿ ಕೇಶವ ಪರವಾಗಿ ಪತ್ನಿ ಹೇಮಲತಾ ಶಿಡ್ಲಘಟ್ಟ,ಚಿಂತಾಮಣಿಯಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಜೊತೆಗೆ ಚಿಕ್ಕಬಳ್ಳಾಪುರ ಜೆಡಿಎಸ್ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಪರವಾಗಿ ಪ್ರಚಾರ ಮಾಡುವುದಾಗಿ ತಿಳಿಸಿದ್ದಾರೆ.