ಪಾಂಡವರ ಜತೆ ಹೋಲಿಕೆಗೆ ಬಿಜೆಪಿಗೆ ನೈತಿಕತೆಯೇ ಇಲ್ಲ
ಚಿಕ್ಕಬಳ್ಳಾಪುರ: ಸದನದಲ್ಲಿಯೇ ಬ್ಲೂಫಿಲಂ ನೋಡಿದ ಮತ್ತು ಸ್ನೇಹಿತನ ಹೆಂಡತಿಯ ಮೇಲೆ ಅತ್ಯಾಚ್ಯಾರಕ್ಕೆ ಯತ್ನಿಸಿದ ಬಿಜೆಪಿ ಮುಖಂಡರು ತಮ್ಮನ್ನು ಧರ್ಮಪಾಲಕರಾದ ಪಾಂಡವರಿಗೆ ಹೋಲಿಸಿಕೊಳ್ಳುತ್ತಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ವಿ.ನಾಗರಾಜ್ ವ್ಯಂಗ್ಯವಾಡಿದರು.
ನಗರದ ಹರ್ಷೋದಯ ಕಲ್ಯಾಣ ಮಂಟಪದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ತಮ್ಮನ್ನು ಅರ್ಜುನ, ನರೇಂದ್ರ ಮೋದಿ ಕೃಷ್ಣ, ಬಿಜೆಪಿಯವರು ಪಾಂಡವರು. ಕುಮಾರಸ್ವಾಮಿ ದುರ್ಯೋಧನ, ಜೆಡಿಎಸ್ ಕೌರವರ ಪಕ್ಷ ಎಂದೆಲ್ಲಾ ಹೋಲಿಕೆ ಮಾಡಿದ್ದಾರೆ. ಬ್ಲೂಫಿಲಂ ನೋಡಿದ, ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ, ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ತಮ್ಮ ಪಕ್ಷದವರೇ ಸಿಕ್ಕಿ ಹಾಕಿಕೊಂಡಿರುವಾಗ ಜೆಡಿಎಸ್ ಅನ್ನು ಟೀಕಿಸುವ ನೈತಿಕತೆ ಅವರಿಗೆಲ್ಲಿದೆ ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ಸ್ಪರ್ಧೆಯಿಂದ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ರಾಜಕೀಯ ಸಂಚಲನ ಉಂಟಾಗಿದ್ದು ಹೆಚ್ಚಿಗೆ ಜನರ ಒಲವು ವ್ಯಕ್ತವಾಗುತ್ತಿದೆ. ಈಗಾಗಲೇ ಅನಿತಾ ಕುಮಾರಸ್ವಾಮಿ, ಜಮೀರ್ ಅಹಮದ್, ನಿಖಿಲ್ ಗೌಡ ಅದ್ದೂರಿ ಪ್ರಚಾರವನ್ನು ನಡೆಸಿದ್ದು, ಇದೀಗ ಬೂತ್ ಮಟ್ಟದಲ್ಲಿ ಜನರ ಬಳಿಗೆ ಹೋಗಿ ಕುಮಾರಸ್ವಾಮಿಯ ಬಗ್ಗೆ ತಿಳಿಸಲಾಗುತ್ತಿದೆ ಎಂದರು.
ದೇವೇಗೌಡರ ಕುಟುಂಬದಲ್ಲಿ ಯಾವುದೇ ಒಡಕಿಲ್ಲ.ರೇವಣ್ಣ ಮತ್ತು ಕುಮಾರಸ್ವಾಮಿ ಮಧ್ಯೆ ಜಗಳ ಉಂಟಾಗಿದೆ. ಇದರಿಂದ ರೇವಣ್ಣ, ಅವರ ಮಗ ಪ್ರಜ್ವಲ್ ಗೌಡ ಇಲ್ಲಿಗೆ ಪ್ರಚಾರಕ್ಕೆ ಬರುತ್ತಿಲ್ಲ ಎನ್ನುವುದು ಸುಳ್ಳು ಎಂದರು. ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಮಾತನಾಡಿದರು. ತಾಪಂ ಮಾಜಿ ಅಧ್ಯಕ್ಷ ವೆಂಕಟನಾರಾಯಣಪ್ಪ, ಮುಖಂಡರಾದ ಎಂ.ಪ್ರಕಾಶ್, ಮುನಿರಾಜು ಸೇರಿ ಅನೇಕರಿದ್ದರು.